ದ.ಕ.: ಉತ್ತಮ ಮಳೆ
ಮಂಗಳೂರು, ಮೇ 15:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ರಾತ್ರಿಯಿಂದ ರವಿವಾರ ಬೆಳಗ್ಗಿನವರೆಗೆ ಉತ್ತಮ ಮಳೆಯಾಗಿದೆ. ನಗರದಲ್ಲಿ ಸುರಿದ ಗಾಳಿಮಳೆಗೆ ಅತ್ತಾವರದಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು. ಮುಂಜಾನೆ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಮನಪಾ ಸಿಬ್ಬಂದಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಿದರು.
ಮರ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಕೆಲಹೊತ್ತು ವಿದ್ಯುತ್ ಸಂಪರ್ಕವು ಕಡಿತಗೊಂಡಿತ್ತು.
ಮಳೆಯ ರಭಸಕ್ಕೆ ಕೂಳೂರು ಮೇಲ್ಸೆತುವೆಯಲ್ಲಿ ಮಳೆ ನೀರು ಹರಿಯದೆ ಕೃತಕ ನೆರೆ ಸೃಷ್ಟಿಯಾಯಿತು. ಪರಿಣಾಮ ವಾಹನ ಸಂಚಾರಕ್ಕೂ ತೊಡಕುಂಟಾಯಿತು.
ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆಯವರೆಗೆ ಬಂಟ್ವಾಳದಲ್ಲಿ 56.2 ಮಿ.ಮೀ., ಮಂಗಳೂರು 27.4 ಮಿ.ಮೀ., ಬೆಳ್ತಂಗಡಿ 23.6 ಮಿ.ಮೀ., ಪುತ್ತೂರು 14.1 ಮಿ.ಮೀ., ಸುಳ್ಯ 2.4 ಮಿ.ಮೀ., ಮೂಡುಬಿದಿರೆ 29.4 ಮಿ.ಮೀ., ಕಡಬ 3.4 ಮಿ.ಮೀ. ಮಳೆ ಸುರಿದಿದೆ. ತುಂಬೆ ವೆಂಟೆಡ್ ಡ್ಯಾಮ್‌ನಲ್ಲಿ ಶನಿವಾರ ಬೆಳಗ್ಗೆ 4ಅಡಿಯಿದ್ದ ನೀರಿನ ಮಟ್ಟ ರವಿವಾರ ಬೆಳಗ್ಗೆ 3 ಅಡಿ 9 ಇಂಚಿಗೆ ಇಳಿದಿದೆ.





