ಭಾರೀ ಗಾಳಿ,ಮಳೆಗೆ 60 ಲಕ್ಷ ರೂ.ಬೆಳೆ ಹಾನಿ

ದಾವಣಗೆರೆ,ಮೇ15: ಜಿಲ್ಲೆಯಲ್ಲಿ ಶನಿವಾರ ಸಂಜೆ ಸುರಿದ ಭಾರೀ ಮಳೆ ಗಾಳಿಗೆ ತಾಲೂಕಿನ ಲೋಕಿಕೆರೆ ಹೋಬಳಿಯ ಹೂವಿನಮಡು ಗ್ರಾಮದ ಮನೆಗಳ ಹೆಂಚು ಹಾರಿ, ಫಲಕ್ಕೆ ಬಂದ ತೆಂಗು, ಅಡಿಕೆ, ಬಾಳೆ, ಭತ್ತ ಸಂಪೂರ್ಣ ನಾಶಗೊಂಡು ಬರೋಬ್ಬರಿ 60 ಲಕ್ಷ ರೂ.ಗಳಿಗೂ ಅಧಿಕ ಹಾನಿಯಾಗಿದೆ.
ಹೂವಿನಮಡು ಗ್ರಾಮದ ಚಿಕ್ಕಜ್ಜರ ಹನುಮಂತಪ್ಪ ಅವರ 4 ಎಕರೆ ಅಡಿಕೆ, ತೆಂಗಿನ ತೋಟ ನೆಲಕಚ್ಚಿದ್ದು, ಕುಟುಂಬಕ್ಕೆ ಸೇರಿದ್ದ 35 ವರ್ಷದ ತೆಂಗು, 15 ವರ್ಷದ ಅಡಿಕೆಯಲ್ಲಿ ಫಲಕ್ಕೆ ಬಂದಿದ್ದ 450 ಅಡಿಕೆ, 800 ತೆಂಗು ವಾಯುದೇವನ ಕೋಪಕ್ಕೆ ಧರೆಗುರುಳಿವೆ. ಲೋಕಿಕೆರೆ ವ್ಯಾಪ್ತಿಯ ಹೂವಿನಮಡು, ಶ್ಯಾಗಲೆ, ಕಂದಕಲ್ಲು, ಗಿಡ್ಡನಹಳ್ಳಿ ಗ್ರಾಮಗಳಲ್ಲಿ ಶನಿವಾರ ಸಂಜೆ ಭಾರೀ ಗಾಳಿಯೊಂದಿಗೆ ಆರಂಭವಾದ ಮಳೆ ಕ್ಷಣಾರ್ಧದಲ್ಲಿ ಎಲ್ಲಾ ಬೆಳೆಯನ್ನು ನಾಶಮಾಡಿದೆ. ಗಿಡ್ಡನಹಳ್ಳಿಯಲ್ಲಿ 14 ಮನೆ, ಶ್ಯಾಗಲೆ ಕ್ಯಾಂಪ್‌ನಲ್ಲಿ 15 ಮನೆ, ಹೂವಿನ ಮಡು ಗ್ರಾಮದಲ್ಲಿ 12 ಮನೆಗಳ ಹೆಂಚುಗಳು ಗಾಳಿಗೆ ಹಾರಿಹೋಗಿದ್ದು, ಮನೆ ಕಳೆದುಕೊಂಡವರು ತಲೆಮೇಲೆ ಕೈಹೊತ್ತು ಕುಳಿತದ್ದು ಎಂತಹವರಿಗೆ ಮರುಕ ಹುಟ್ಟಿಸುವಂತಿತ್ತು. ಈ ಮೂರ್ನಾಲ್ಕು ಗ್ರಾಮಗಳಲ್ಲಿ ಒಟ್ಟು 20 ಎಕರೆ ಭತ್ತ, 15 ಎಕರೆ ಬಾಳೆ, 3 ಸಾವಿರ ಅಡಕೆ ಮರ, 500 ತೆಂಗಿನ ಗಿಡಗಳು ಸೇರಿದಂತೆ ರಸ್ತೆ ಬದಿಯ ದೊಡ್ಡ ದೊಡ್ಡ ಮರಗಳೆಲ್ಲಾ ಧರೆಗುರುಳಿವೆ. ನೂರಾರು ಮನೆಗಳ ಹೆಂಚು, ಗೋಡೆಗಳು ಕುಸಿದಿವೆ. ಕೃಷಿಯಿಂದಲೇ ಜೀವನ ನಡೆಸುತ್ತಿರುವ ಹೂವಿನಮಡು ಗ್ರಾಮದ ಚಿಕ್ಕಜ್ಜರ ಹನುಮಂತಪ್ಪ ಅವರ ಕುಟುಂಬದ ನಾಲ್ಕು ಎಕರೆ ಫಲಕ್ಕೆ ಬಂದಿದ್ದ ತೋಟಕ್ಕೆ ಸಂಪೂರ್ಣ ಹಾನಿಯಾಗಿದೆ. ಹನುಮಂತಪ್ಪ ಸೇರಿ ನಾಲ್ವರು ಅಣ್ಣತಮ್ಮಂದಿರು ಕಷ್ಟಪಟ್ಟು ತೋಟ ಬೆಳೆಸಿದ್ದರು. ಪರಿಣಾಮ ಹನುಮಂತಪ್ಪ ಮಡದಿ ಚಂದ್ರಮ್ಮ, ಸೊಸೆ ಲೀಲಾ ಸೇರಿದಂತೆ ಕುಟುಂಬಸ್ಥರು ಮನೆ, ಮಕ್ಕಳ ಭವಿಷ್ಯ ನೆನೆದು ಹೊಲದಲ್ಲಿಯೇ ಬಿಕ್ಕಿಬಿಕ್ಕಿ ಅತ್ತರು. ಕುಟುಂಬದವರ ರೋದನ ಮುಗಿಲುಮುಟ್ಟಿತ್ತು. ಗಾಳಿಯ ರಭಸಕ್ಕೆ ಅನೇಕ ಮನೆಗಳ ಹೆಂಚುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹತ್ತಿಪ್ಪತ್ತು ಅಡಿ ದೂರಕ್ಕೆ ಹಾರಿಬಿದ್ದಿದ್ದು, ಶ್ಯಾಗಲಿ ಕ್ಯಾಂಪ್‌ನ ಮನೆಯೊಳಗಿದ್ದ ಗಂಗಮ್ಮ ಎಂಬವರ ಕೈಗೆ ಹೆಂಚು ಬಿದ್ದ ಪರಿಣಾಮ ನಗರದ ಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಿಡ್ಡನಹಳ್ಳಿ ಗ್ರಾಮದಲ್ಲೂ ವೃದ್ಧರೋರ್ವರ ಮೇಲೆ ಹೆಂಚು ಬಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಜಿಪಂ ಸದಸ್ಯ ಕೆ.ಎಚ್. ಓಬಳೇಶ್, ಕಂದಾಯ ಅಧಿಕಾರಿ ಆರ್.ಬಿ. ಮಂಜುನಾಥ್, ಉಪತಹಶೀಲ್ದಾರ್ ರಾಮಸ್ವಾಮಿ ಮತ್ತಿತರರು ಭೇಟಿ ನೀಡಿ, ಪರಿಹಾರ ದೊರಕಿಸುವ ಭರವಸೆ ನೀಡಿದರು.





