‘ನೋವು-ನಲಿವು ಹಂಚುವ ಕವಿಗಳಿಂದ ಶ್ರೇಷ್ಠ ಕವಿತೆಗಳ ಅನಾವವರಣ ಸಾಧ್ಯ: ಖ್ಯಾತ ಸಾಹಿತಿ ನಾ. ಡಿಸೋಜ
ಶಿಕಾರಿಪುರ: ‘ಅಂತಃಸ್ಥ’; ‘ನೆನಪುಗಳ ಓಲೆ’ ಕವನ ಸಂಕಲನ ಲೋಕಾರ್ಪಣೆ

ಶಿಕಾರಿಪುರ, ಮೇ 15: ಕವಿತೆಯ ಮೂಲಕ ಸಂತೋಷ ಮತ್ತು ನೋವನ್ನು ಹಂಚಿಕೊಳ್ಳುವ ಕವಿಗಳಿಂದ ಶ್ರೇಷ್ಠ ಕವಿತೆಗಳು ಹೊರಹೊಮ್ಮಲು ಸಾಧ್ಯ ಎಂದು ಖ್ಯಾತ ಸಾಹಿತಿ ನಾ. ಡಿಸೋಜ ತಿಳಿಸಿದರು.
ಪಟ್ಟಣದ ದಿ. ನರಸಪ್ಪ ಸ್ಮಾರಕ ರಂಗಮಂದಿರದಲ್ಲಿ ಕವಯತ್ರಿ ಸುಮನ ಸುರೇಶರವರ ‘ಅಂತಃಸ್ಥ’ ಹಾಗೂ ವಿವೇಕ ನಂಬಿಯಾರ್ ರವರ ‘ನೆನಪುಗಳ ಓಲೆ’ ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಪ್ರತಿಯೊಬ್ಬರೂ ಪುಸ್ತಕಗಳನ್ನು ಖರೀದಿಸಿ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಕಾವ್ಯ ಕವಿತೆ ರಚಿಸಿದವರಿಗೆ ಪ್ರೋತ್ಸಾಹಿಸುವ ಜತೆಗೆ ಗೌರವಿಸಿದಂತಾಗುತ್ತದೆ. ಅಂಸಃಸ್ಥ ಕವಿತೆಯ ಮೂಲಕ ಕವಯತ್ರಿ ಸುಮನ ಪತಿಯ ಅಗಲಿಕೆಯ ನೋವನ್ನು ಕಾವ್ಯದ ರೂಪದಲ್ಲಿ ತೆರೆದಿಡುವ ಪ್ರಯತ್ನ ನಡೆಸಿ ಆಂತರಿಕ ತುಮುಲವನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಪ್ರತಿಯೊಬ್ಬ ಕವಿ, ಕವಯತ್ರಿ, ಲೇಖಕರು ಧ್ವನಿಯಿಲ್ಲದ ಜನಸಾಮಾನ್ಯರಿಗೆ ಬರವಣಿಗೆಯ ರೂಪದಲ್ಲಿ ಧ್ವನಿಯಾಗುವ ಕಾರ್ಯವನ್ನು ಮಾಡುವಂತೆ ತಿಳಿಸಿದ ಅವರು ಸಂತೋಷವನ್ನು ಕವಿತೆಯ ಮೂಲಕ ವ್ಯಕ್ತಪಡಿಸುವ ಬರಹಗಾರರು ನೋವನ್ನು ಅದ್ಬುತವಾಗಿ ವ್ಯಕ್ತಪಡಿಸಿ ಅತ್ಯುತ್ತಮ ಕವಿತೆಗಳನ್ನು ಹೊರತರಲು ಶ್ರಮಿಸಬೇಕೆಂದರು.
ಓದುಗರ ಜೀವನೋತ್ಸಾಹವನ್ನು ಇಮ್ಮಡಿಗೊಳಿಸುವ ನೆನಪುಗಳ ಓಲೆ ಕವಿತೆ ಮೂಲಕ ಕವಿ ವಿವೇಕ ನಂಬಿಯಾರ್ ಉತ್ತಮ ಕವಿತೆಯನ್ನು ರಚಿಸಿದ್ದಾರೆ. ಕವಿಗಳ ಸಾಹಿತ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಎಲ್ಲರೂ ಪುಸ್ತಕಗಳನ್ನು ಖರೀದಿಸಿ ಓದಬೇಕು ಎಂದು ಕಿವಿಮಾತು ಹೇಳಿದರು.
ಗಝಲ್ ಸಾಹಿತಿ ಹಲ್ಲಾ ಗಿರಿರಾಜ್ ಮಾತನಾಡಿ, ಮಾನವೀಯ ವೌಲ್ಯ, ಸಮಾಜದ ಒಗ್ಗಟ್ಟು ಗಟ್ಟಿಗೊಳಿಸುವ, ವಾಸ್ತವ ಸತ್ಯವನ್ನು ಒಳಗೊಂಡ ಲೇಖನ, ಸಾಹಿತ್ಯ ಇಂದಿನ ಅನಿವಾರ್ಯವಾಗಿದೆ. ಜಾತಿ ಧರ್ಮಗಳ ತಳಹದಿಯನ್ನು ಹೊರತುಪಡಿಸಿ ಕವಿ ಲೇಖಕರು ಸಾಹಿತ್ಯ ಕೃತಿಯನ್ನು ರಚಿಸಬೇಕು. ಆದರೆ ಕೆಲ ಸಾಹಿತಿಗಳ ಲೇಖನಗಳಲ್ಲಿ ಜಾತಿ ಧರ್ಮಗಳ ಲೇಪನ ಕಂಡುಬರುತ್ತಿರುವುದು ವಿಷಾದನೀಯ ಎಂದರು.
ವೇದಿಕೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಕಾನೂರು ಮಲ್ಲಿಕಾರ್ಜುನ, ಕವಿ ನಾಗರಾಜ್, ವಿವೇಕ್ ನಂಬಿಯಾರ್, ಕವಯತ್ರಿ ಸುಮನಾ ಸುರೇಶ, ಫೊಟೋ ಜರ್ನಲಿಸ್ಟ್ ಸುಧಾಕರ್ ಜೈನ್,ಕೆಂಗಟ್ಟೆ ಲಕ್ಷ್ಮಣ್, ನಿರಂಜನಮೂರ್ತಿ, ಶುಭಾ ಮತ್ತಿತರರು ಉಪಸ್ಥಿತರಿದ್ದರು.







