ಶಿವಮೊಗ್ಗದಲ್ಲಿ ಸ್ನೇಹಿತರೇ ಹಾಕಿದ್ರು ಪಂಗನಾಮ...!!
ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಲಕ್ಷಾಂತರ ರೂ. ವಂಚನೆ: ಇಬ್ಬರ ಸೆರೆ
ಶಿವಮೊಗ್ಗ, ಮೇ 15: ಸ್ನೇಹಿತನೋರ್ವನಿಗೆ ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ವರದಿಯಾಗಿದೆ. ಅಣ್ಣಾ ನಗರದ ನಿವಾಸಿ ಇಂಜಿನಿಯರಿಂಗ್ ಪದವೀಧರ ನೂತನ್ (24) ಹಾಗೂ ಗೋಪಾಳದ ನಿವಾಸಿ ಪ್ರಜ್ವಲ್ (25) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಗೋಪಾಳದ ನಿವಾಸಿ ಇಂಜಿನಿಯರಿಂಗ್ ಪದವೀಧರ ವಿಶ್ವನಾಥ್ (24) ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ಆರೋಪಿಗಳಿಬ್ಬರು ಇವರ ಆತ್ಮೀಯ ಸ್ನೇಹಿತರಾಗಿರುವುದು ಪ್ರಕರಣದ ವಿಶೇಷವಾಗಿದೆ. ಪ್ರಕರಣ ಸಂಬಂಧ ವಿಶ್ವನಾಥ್ ದೂರು ದಾಖಲಿಸಿದಂತಯೇ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ನಿರೀಕ್ಷಕ ಕೆ.ಟಿ.ಗುರುರಾಜ್, ಉಪನಿರೀಕ್ಷಕ ಶಿವಪ್ರಸಾದ್ ನೇತೃತ್ವದ ಪೊಲೀಸ್ ತಂಡ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ನೇಮಕಾತಿ ಪತ್ರ: ಆರೋಪಿಗಳಿಬ್ಬರು ವಿಶ್ವನಾಥ್‌ರವರ ಆತ್ಮೀಯ ಸ್ನೇಹಿತರಾಗಿದ್ದರು. ಬೆಂಗಳೂರು ವಿದ್ಯುತ್ ವಿತರಣಾ ಸಂಸ್ಥೆ (ಬೆಸ್ಕಾಂ) ಯಲ್ಲಿ ಇಂಜಿನಿಯರಿಂಗ್ ಹುದ್ದೆ ಖಾಲಿಯಿದೆ. ತಮಗೆ ಇಂತಿಷ್ಟು ಹಣ ನೀಡಿದರೆ ಆ ಹುದ್ದೆ ಕೊಡಿಸುವುದಾಗಿ ಆರೋಪಿಗಳಿಬ್ಬರು ವಿಶ್ವನಾಥ್‌ಗೆ ತಿಳಿಸಿದ್ದರು. ಸ್ನೇಹಿತರ ಮಾತು ನಂಬಿದ ವಿಶ್ವನಾಥ್ 2.60 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ. ತದನಂತರ ಆರೋಪಿಗಳು ಬೆಸ್ಕಾಂನಲ್ಲಿ ಇಂಜಿನಿಯರಿಂಗ್ ಕೆಲಸಕ್ಕೆ ಆಯ್ಕೆಯಾಗಿರುವ ನಕಲಿ ನೇಮಕಾತಿ ಆದೇಶದ ಪತ್ರ ಸೃಷ್ಟಿಸಿ ವಿಶ್ವನಾಥ್‌ಗೆ ನೀಡಿದ್ದರು. ಇತ್ತೀಚೆಗೆ ವಿಶ್ವನಾಥ್‌ರವರು ಸ್ನೇಹಿತರು ನೀಡಿದ್ದ ನೇಮಕಾತಿ ಆದೇಶದ ಪ್ರತಿಯೊಂದಿಗೆ ಬೆಂಗಳೂರಿಗೆ ತೆರಳಿದ್ದರು. ಬೆಸ್ಕಾಂ ಮುಖ್ಯ ಕಚೇರಿಯಲ್ಲಿ ಆದೇಶದ ಪ್ರತಿ ತೋರಿಸಿ ಕೆಲಕ್ಕೆ ಆಯ್ಕೆಯಾಗಿರುವ ವಿಷಯವನ್ನು ಅಲ್ಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ನೇಮಕಾತಿ ಆದೇಶದ ಪ್ರತಿ ಪರಿಶೀಲಿಸಿದ ಅಲ್ಲಿನ ಅಧಿಕಾರಿಗಳು ಇದು ನಕಲಿಯಾಗಿದ್ದು, ತಮ್ಮ ಕಚೇರಿಯಿಂದ ಈ ರೀತಿಯ ಯಾವುದೇ ಆದೇಶದ ಪ್ರತಿ ರವಾನಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸ್ನೇಹಿತರಿಂದ ವಂಚನೆಗೊಳಗಾಗಿರುವುದನ್ನರಿತ ವಿಶ್ವನಾಥ್‌ರವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದರು. ನಿರೀಕ್ಷಕ ಕೆ.ಟಿ.ಗುರುರಾಜ್, ಉಪನಿರೀಕ್ಷಕ ಶಿವಪ್ರಸಾದ್ ನೇತೃತ್ವದ ಪೊಲೀಸ್ ತಂಡ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.







