ಭಾಷೆ ಉಳಿವಿಗಾಗಿ ಅತಿ ಮಡಿವಂತಿಕೆ ಬೇಡ: ಅಂಬಾತನಯ ಮುದ್ರಾಡಿ:
ಕಸಾಪ 101ನೆ ಸಂಸ್ಥಾಪನ ದಿನಾಚರಣೆ

ಉಡುಪಿ, ಮೇ 15: ಭಾಷೆಯ ಉಳಿವಿನ ವಿಚಾರದಲ್ಲಿ ಅತೀ ಮಡಿವಂತಿಕೆ ಸರಿಯಲ್ಲ. ಅದೇ ರೀತಿ ಕನ್ನಡ ಭಾಷೆಯನ್ನು ಕೆಟ್ಟ ರೀತಿಯಲ್ಲಿ ಬಳಸುವುದನ್ನು ತಡೆಯಬೇಕಾಗಿದೆ ಎಂದುಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಹೇಳಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ರವಿವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಆಯೋಜಿಸಲಾದ 101ನೆ ಸಂಸ್ಥಾಪನ ದಿನಾಚರಣೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಭಾಷೆಯನ್ನು ಕಟ್ಟುವ ಜೊತೆಗೆ ಅದರ ಸ್ವರೂಪದ ಬಗ್ಗೆಯೂ ನಾವು ಚಿಂತನೆ ಮಾಡಬೇಕಾಗಿದೆ. ಕನ್ನಡಿಗರು ಅಭಿಮಾನ ಶೂನ್ಯರು. ನಮ್ಮ ರಾಜ್ಯದ ಅಂಗಡಿಗಳ ನಾಮಲಕಗಳಲ್ಲಿ ಕನ್ನಡವೇ ಇಲ್ಲವಾಗಿದೆ. ಇದನ್ನು ಕಾನೂನು ಗಳಿಂದ ಜಾರಿಗೆ ತರಲು ಸಾಧ್ಯವಿಲ್ಲ. ನಮ್ಮ ಜನರಲ್ಲಿ ಕನ್ನಡ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು.
ಕಾರ್ಯಕ್ರಮವನ್ನು ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ಉಪೇಂದ್ರ ಸೋಮಯಾಜಿ ಅಭಿನಂದನಾ ಮಾತುಗಳನ್ನಾಡಿದರು. ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು.
ಕಸಾಪ ತಾಲೂಕು ಘಟಕದ ಗೌರವ ಕೋಶಾಧ್ಯಕ್ಷ ಸುದರ್ಶನ್ ಶೆಟ್ಟಿ ಸ್ವಾಗತಿಸಿದರು. ಪದಾಕಾರಿಗಳ ಪಟ್ಟಿಯನ್ನು ತಾಲೂಕು ಗೌರವ ಕಾರ್ಯ ದರ್ಶಿ ಅಲ್ತಾರ್ ನಾಗರಾಜ್ ವಾಚಿಸಿದರು. ಮಹಿಳಾ ಪ್ರತಿನಿ ಗಿರಿಜಾ ಹೆಗ್ಡೆ ಗೌವಂಕರ್ ವಂದಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು.





