‘ಉಪನಗರ ರೈಲು ಯೋಜನೆಗೆ ಕೇಂದ್ರದಿಂದ ಅನುಮೋದನೆ’

ಬೆಂಗಳೂರು, ಮೇ 15: ಬೆಂಗಳೂರು-ಮೈಸೂರು ಉಪನಗರ ರೈಲು ಯೋಜನೆ(ಸಬ್ ಅರ್ಬನ್)ಗೆ ಕೇಂದ್ರ ಸರಕಾರ ಅನುಮೋದನೆ ನೀಡಿದ್ದು, ಶೀಘ್ರವೇ ಯೋಜನೆಗೆ ಚಾಲನೆ ದೊರೆಯಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.
ರವಿವಾರ ನಗರದ ನೈರುತ್ಯ ರೈಲ್ವೆ ವಲಯ ರೈಲ್ವೆ ಇನ್‌ಸ್ಟಿಟ್ಯೂಟ್ ಮೈದಾನದಲ್ಲಿ ಆಯೋಜಿಸಿದ್ದ ರೈಲ್ವೆ ಇಲಾಖೆಯ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ, ಲೋಕಾರ್ಪಣೆ ಮತ್ತು ನಿಲ್ದಾಣದ ಮರು ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಬ್‌ಅರ್ಬನ್ ಯೋಜನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದ್ದು, ಆದ್ಯತೆಯ ಮೇರೆಗೆ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ನಗರ ರೈಲು ನಿಲ್ದಾಣಕ್ಕೆ ಇಡಬೇಕೆಂಬ ಬಹುದಿನಗಳ ಕನ್ನಡಿಗರ ಕನಸು ಇಂದು ಈಡೇರಿದ್ದು, ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರ ಹೆಸರನ್ನು ನೆನಪಿಸಿಕೊಳ್ಳುವುದು ಎಲ್ಲರ ಕರ್ತವ್ಯ ಎಂದು ಹೇಳಿದರು. ರಾಜ್ಯಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ರಾಜ್ಯಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್‌ಕುಮಾರ್ ಮಾತನಾಡಿ, ನಗರ ರೈಲ್ವೆ ನಿಲ್ದಾಣದ ಎದುರು ಎತ್ತರದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಬೇಕು. ಈ ಮೂಲಕ ರಾಯಣ್ಣ ಅವರ ಕೊಡುಗೆಯನ್ನು ಮುಂದಿನ ತಲೆಮಾರಿಗೂ ತಿಳಿಸುವಂತಾಗಬೇಕು ಎಂದು ಹೇಳಿದರು. ಬೆಂಗಳೂರು-ಹುಬ್ಬಳ್ಳಿ ರೈಲ್ವೆ ದ್ವಿಪಥ ಮಾರ್ಗವನ್ನು 2020ರೊಳಗೆ ಮುಗಿಸುವ ಬದಲು ಮುಂದಿನ ಮೂರು ವರ್ಷದೊಳಗೆ ಮುಗಿಸಿದರೆ ರಾಜ್ಯದ ಜನತೆಗೆ ಅನುಕೂಲವಾಗುತ್ತದೆ. ಈ ಬಗ್ಗೆ ರೈಲ್ವೆ ಸಚಿವರು ಗಮನ ಹರಿಸಬೇಕು. ದ್ವಿಪಥ ಪೂರ್ಣಗೊಂಡರೆ ಪ್ರಯಾಣದ ಅವಧಿ 7ಗಂಟೆಯಿಂದ ನಾಲ್ಕೂವರೆ ಗಂಟೆಗೆ ಇಳಿಯಲಿದೆ ಎಂದು ತಿಳಿಸಿದರು. ಅಲ್ಲದೆ, ಈ ಮಾರ್ಗವನ್ನು ವಿದ್ಯುದ್ದೀಕರಣ ಮಾಡಿದರೆ ಇನ್ನಷ್ಟು ಅನುಕೂಲವಾಗಲಿದೆ ಎಂದ ಅವರು, ರಾಜ್ಯದ ನೆಲ, ಜಲ, ಭಾಷೆ ರಕ್ಷಣೆಗೆ ಕೇಂದ್ರ ಸರಕಾರ ರಾಜ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡಲಿದ್ದು, ಈ ವಿಷಯದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಎಂದು ಭರವಸೆ ನೀಡಿದರು.





