ಕೊಳ್ಳುವವರಿಗಾಗಿ ಕಾಯುತ್ತಿದೆ ಮಲ್ಯರ ಐಷಾರಾಮಿ ವಿಮಾನ!

ಮುಂಬೈ, ಮೇ 15: ಒಂದು ಕಾಲದಲ್ಲಿ ‘ಒಳ್ಳೆ ಕಾಲದ ರಾಜ’ ಎನಿಸಿದ್ದ ವಿಜಯ ಮಲ್ಯರ ಖಾಸಗಿ ಐಷಾರಾಮಿ ವಿಮಾನವು ಹರಾಜಿಗಾಗಿ ಕಾಯುತ್ತಿದೆ. ತೆರಿಗೆ ಪ್ರಾಧಿಕಾರವು ತನ್ನ ಬಾಕಿಯನ್ನು ವಸೂಲು ಮಾಡಲು, ಮೃದುವಾದ ಸೋಫಾಗಳು, ಕುಶನ್ ಹಾಸಿಗೆಗಳು, ಬಾರ್‌ಗಳು, ಶವರ್ ಹಾಗೂ ಸ್ನಾನಗೃಹಗಳುಳ್ಳ ಜೆಟ್ ವಿಮಾನವನ್ನು ಹರಾಜು ಹಾಕಲಿದೆ.
25 ಆಸನಗಳ ಈ ವಿಮಾನದಲ್ಲಿ ದೇವಾಧಿದೇವತೆಗಳ ಚಿತ್ರಗಳನ್ನೂ ತೂಗು ಹಾಕಲಾಗಿದೆ. ಹೊರಗಡೆ ವಿಮಾನದ ಮೂತಿಯ ಮೇಲೆ ಮಲ್ಯರ ಒಬ್ಬ ಮಗ ಹಾಗೂ ಇಬ್ಬರು ಹೆಣ್ಣು ಮಕ್ಕಳ ಹೆಸರುಗಳನ್ನು ಬರೆಯಲಾಗಿದೆ. ಜೆಟ್‌ನ ಹೆಸರಿನಲ್ಲಿ ಅವರ ಹೆಸರಿನ ಅಧ್ಯ್ಯಕ್ಷರಗಳಾದ ‘ವಿಜೆಎಂ’ ಸೇರಿವೆ.
ಬ್ಯಾಂಕುಗಳು ಮಲ್ಯರ ಈಗ ನಿಷ್ಕ್ರಿಯಗೊಂಡಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ನಿಂದ ಬಾಕಿಯಿರುವ ರೂ. 9,400 ಕೋಟಿಗೂ ಹೆಚ್ಚು ಅಸಲು-ಬಡ್ಡಿ ವಸೂಲಿಗಾಗಿ ಹೆಣಗುತ್ತಿದ್ದರೆ, ಸೇವಾ ತೆರಿಗೆ ಇಲಾಖೆಯು ತನ್ನ ರೂ. 500 ಕೋಟಿ ಬಾಕಿ ವಸೂಲಿಗಾಗಿ ಅವರ ಖಾಸಗಿ ವಿಮಾನ ಮಾರಾಟಕ್ಕೆ ಭಾರೀ ಪ್ರಯತ್ನ ನಡೆಸುತ್ತಿದೆ.
ಮೂರು ವರ್ಷಗಳಿಗೂ ಹಿಂದೆ ನೆಲ ಹಿಡಿದಿರುವ ಈ ಏರ್‌ಬಸ್ ವಿಮಾನ ಮುಂಬೈಯ ಏಕಾಂತ ನಿಲ್ದಾಣದಲ್ಲಿ ಧೂಳು ತಿನ್ನುತ್ತ ನಿಂತಿದೆ.
ಏರ್‌ಬಸ್ ಎ-319-133 ಸಿಜೆಯನ್ನು ಇದ್ದಲ್ಲಿಯೇ, ಇರುವಂತೆಯೇ ಹೇಗಿದೆಯೋ ಹಾಗೆ ಮತ್ತು ದೂರು ರಹಿತ ನೆಲೆಯಲ್ಲಿ ಹರಾಜು ಹಾಕಲಾಗುವುದು.
ವಿಮಾನದ ಹರಾಜು ಮೊದಲು ಮೇ 12-13ಕ್ಕೆ ನಿಗದಿಯಾಗಿತ್ತು. ಆದರೆ, ಕೇವಲ ಒಂದೇ ಬಿಡ್ ಬಂದ ಕಾರಣ ಅದನ್ನು ಜೂ.29-30ಕ್ಕೆ ಮುಂದೂಡಲಾಗಿದೆ. ಸರಕಾರಿ ಸ್ವಾಮ್ಯದ ಎಂಎಸ್‌ಟಿಸಿ ಲಿ. ನಡೆಸುವ ಹರಾಜಿನಲ್ಲಿ ಭಾಗವಹಿಸಲಿಚ್ಛಿಸುವವರು ರೂ. 1 ಕೋಟಿ ಮುಂಗಡ ಠೇವಣಿಯಿರಿಸಬೇಕು.
ಆದರೆ, ಮಲ್ಯರ ಇತರ ಆಸ್ತಿಗಳಾದ ಮುಂಬೈಯ ಕಿಂಗ್‌ಫಿಶರ್ ಹೌಸ್, ಕಿಂಗ್‌ಫಿಶರ್ ಲಾಂಛನ ಇತ್ಯಾದಿಗಳನ್ನು ಕೊಳ್ಳುವುದಕ್ಕೂ ಯಾರೂ ಉತ್ಸಾಹ ತೋರಿಸಿಲ್ಲ.







