ವಿಜಯನಾಥ್ ಶೆಣೈ ಅವರ ಮನುಷ್ಯ ವಿರೋಧಿ ಕಂಬಗಳು!
ಮಾನ್ಯರೆ,
ಹಸ್ತಶಿಲ್ಪ ಮೂಲಕ ಇಂದು ರಾಜ್ಯಮಟ್ಟದಲ್ಲಿ ಗುರುತಿಸಲ್ಪಟ್ಟಿರುವ, ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಸಂಸ್ಥಾಪಕ ವಿಜಯನಾಥ್ ಶೆಣೈ ಅವರು ಇದೀಗ ದುಬಾರಿ ಶುಲ್ಕದ ಜೊತೆಗೆ ಅವುಗಳನ್ನು ವೀಕ್ಷಣೆಗೆ ಇಟ್ಟಿದ್ದಾರೆ. ಈ ಭವ್ಯ ಮನೆಗಳ ಹಿಂದಿರುವ ಶೆಣೈ ಅವರ ಸಾಧನೆ, ಶ್ರಮ ಇವುಗಳು ಮೆಚ್ಚುವಂತಹದು. ಆದರೆ ಶನಿವಾರ ಬೆಂಗಳೂರಿನಲ್ಲಿ ನಡೆದ ಜಾನಪದ ಪರಿಷತ್ ಕಾರ್ಯಕ್ರಮವೊಂದಲ್ಲಿ ಮಾತನಾಡುತ್ತಾ, ಭು ಸುಧಾರಣೆಯ ಪರಿಣಾಮ ಅವಿಭಕ್ತ ಕುಟುಂಬಗಳು ವಿಂಗಡಣೆಗೊಂಡು, ಜಾನಪದ ಸಂಪತ್ತು ಸಹ ಅಳಿವಿನಂಚಿಗೆ ಬಂದವು. ದೊಡ್ಡ ಮನೆಗಳು ನಾಶವಾಗಿ ಸಣ್ಣ ಸಣ್ಣ ಮನೆಗಳಾದವು. ಇದರಿಂದ ಜಾನಪದ ಸಂಪತ್ತು ನಾಶವಾದವು ಎಂದು ಹೇಳಿಕೆ ನೀಡಿದ್ದಾರೆ. ಗೋಕುಲಾಷ್ಟಮಿಗೂ ಇಮಾಂಸಾಬಿಗೂ ಸಂಬಂಧವನ್ನು ಜೋಡಿಸಲು ಅವರು ಯತ್ನಿಸಿದ್ದಾರೆ. ಇದು ನಿಜಕ್ಕೂ ಪ್ರಶ್ನಾರ್ಹವಾಗಿದೆ.
ಭೂಸುಧಾರಣಾ ಕಾಯ್ದೆಯಿಂದಾಗಿ ಭೂಮಿಯಿಲ್ಲದೆ ಇನ್ನೊಬ್ಬರ ಭೂಮಿಯಲ್ಲಿ ದುಡಿಯುತ್ತಿದ್ದ ಸಾವಿರಾರು ಜನರು ಭೂಮಿಯ ಹಕ್ಕನ್ನು ಪಡೆದರು. ಇಲ್ಲಿ ಯಾರೂ ವಿಜಯನಾಥ್ ಶೆಣೈ ಅವರ ಬಳಗದ ಮನೆಯಲ್ಲಿ ಪಾಲು ಕೇಳಲಿಲ್ಲ. ತಾವು ದುಡಿಯುತ್ತಿದ್ದ ಭೂಮಿಯನ್ನು ತಮ್ಮದಾಗಿಸಿಕೊಂಡರು. ಅದು ಅವರ ಹಕ್ಕಾಗಿತ್ತು. ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಲ್ಲಿ ಭೂಸುಧಾರಣಾ ಕಾಯ್ದೆ ನೀಡಿರುವ ಕೊಡುಗೆ ಬಹುದೊಡ್ಡದು. ಅವಿಭಕ್ತ ಮನೆಗಳು ನಾಶವಾಗಲು ಭೂಸುಧಾರಣೆ ಕಾಯ್ದೆ ಕಾರಣ ಎನ್ನುವುದು ಅವರ ಒಳಗಿನ ಬೇರೆ ಅಸಮಾಧಾನದ ಕಾರಣದಿಂದ ಹುಟ್ಟಿಕೊಂಡಿರುವುದು ಆಗಿರಬಹುದು. ಅನೇಕ ಬೃಹತ್ ಮನೆಗಳ ಸದಸ್ಯರು ವಿದೇಶಗಳಿಗೆ ತೆರಳಿದ್ದು, ಅಮೆರಿಕದ ಐಟಿ ಬಿಟಿ ಕಂಪೆನಿಗಳಲ್ಲಿ ಡಾಲರ್ ಎಣಿಸತೊಡಗಿದ್ದು ಕೂಡ ಅವಿಭಕ್ತ ಮನೆಗಳು ಬೇರೆ ಬೇರೆಯಾಗಲು ಕಾರಣವಾಗಿವೆ. ನಗರೀಕರಣ ಬೆಳೆದಂತೆ, ಗ್ರಾಮೀಣ ಯುವಕರು ನಗರಗಳ ಮೇಲೆ ಆಸಕ್ತಿ ತಳೆದಂತೆ ಮನೆಗಳೂ ಸಣ್ಣದಾಗುತ್ತಾ ಹೋದವು. ಇದು ಸ್ವತಃ ಅವರದೇ ಸ್ವಯಂ ಆಯ್ಕೆಯಾಗಿದೆ. ಆದರೆ ವಿಜಯನಾಥ್ ಶೆಣೈ ಅವರು, ಭೂಮಿಯಿಲ್ಲದೆ ಜೀತದಾಳುಗಳಂತೆ ದುಡಿಯುತ್ತಿದ್ದ ಕೆಳವರ್ಗದ ಜನರ ಮೇಲೆ, ಮನೆ ಒಡೆದ ಆರೋಪ ಮಾಡುತ್ತಿದ್ದಾರೆ. ಸಂಸ್ಕೃತಿ ಎಂದರೆ ಭೂಮಾಲಕತನ, ಜಮೀನ್ದಾರಿಕೆ, ಜೀತ ಪದ್ಧತಿ, ಜಾತಿ ಪದ್ಧತಿ ಎಂದೇ ಅವರು ಇನ್ನೂ ನಂಬಿದಂತಿದೆ. ಭೂಸುಧಾರಣೆ ಕಾಯ್ದೆಯ ಸಾಮಾಜಿಕ ನ್ಯಾಯಕ್ಕೆ ಅಡ್ಡಿ ಬರುವ ವಿಜಯನಾಥ್ ಶೆಣೈ ಅವರ ಮನೆಯ ಕಂಬಗಳು, ಗೋಡೆಗಳು ಇದ್ದರೂ ಒಂದೇ, ಇರದಿದ್ದರೂ ಒಂದೇ. ಅವುಗಳು ಮನುಷ್ಯ ಸಂವೇದನೆಗಳಿಲ್ಲದ ಜಡ ಕಂಬಗಳು, ಗೋಡೆಗಳು. ಅವುಗಳಿಂದ ಈ ಸಮಾಜ, ನಾವು ಪಡೆದುಕೊಳ್ಳುವುದು ಏನೂ ಇಲ್ಲ. ಅವರ ಹೆರಿಟೇಜ್ ವಿಲೇಜ್ ಈ ನಾಡಿನ ಭವ್ಯ ಹಸ್ತ ಶಿಲ್ಪಗಳ ಸಂಗ್ರಹಾಲಯವಾಗಲಿ ಹೊರತು, ಜಾತಿ, ಅಸಮಾನತೆ, ಜೀತ, ಜಮೀನ್ದಾರಿಕೆಗಳ ವಿಲೇಜ್ ಆಗದಿರಲಿ.







