ನಾಗರಿಕ ಸೇವಾ ಪರೀಕ್ಷೆಯ ಅಗ್ರಸ್ಥಾನಿಗೆ ಶೇ.52.49 ಅಂಕ!

ಹೊಸದಿಲ್ಲಿ, ಮೇ 15: ನಾಗರಿಕ ಸೇವಾ ಪರೀಕ್ಷೆಯಲ್ಲಿ ಅತ್ಯುನ್ನತ ಸ್ಥಾನ ಪಡೆದಿರುವ ಟೀನಾ ಡಾಬಿ ಪಡೆದಿರುವ ಅಂಕಗಳೆಷ್ಟು ಗೊತ್ತೇ? ಕೇವಲ ಶೇ.52ಕ್ಕಿಂತ ಸ್ವಲ್ಪ ಹೆಚ್ಚು! ಇದು ದೇಶದ ಉನ್ನತ ಅಧಿಕಾರಿಗಳ ಆಯ್ಕೆಗಾಗಿ ಯುಪಿಎಸ್‌ಸಿ ನಡೆಸುತ್ತಿರುವ ಪ್ರತಿಷ್ಠಿತ ಪರೀಕ್ಷೆಯ ವೌಲ್ಯ ಮಾಪನದಲ್ಲಿ ಬಳಸಲಾಗುವ ಕಠಿಣ ವೌಲ್ಯಮಾಪನದ ಮಾನದಂಡವನ್ನು ಪ್ರತಿಬಿಂಬಿಸುತ್ತದೆ.
ದಿಲ್ಲಿಯ ಲೇಡಿ ಶ್ರೀರಾಮ್ ಕಾಲೇಜಿನ ಪದವೀಧರೆಯಾಗಿರುವ 22ರ ಹರೆಯದ ಟೀನಾ, 2015ನೆ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಅವರು ಪ್ರಧಾನ ಪರೀಕ್ಷೆಯ 1,750 ಹಾಗೂ ಸಂದರ್ಶನದ 275 ಸಹಿತ ಒಟ್ಟು 2,025 ಅಂಕಗಳಲ್ಲಿ 1,063 ಅಂಕಗಳನ್ನು(ಶೇ.52.49) ಗಳಿಸಿದ್ದಾರೆಂದು ಯುಪಿಎಸ್‌ಸಿ ತಿಳಿಸಿದೆ.
ಎರಡನೆಯ ರ್ಯಾಂಕ್ ಪಡೆದಿರುವ ಜಮ್ಮು-ಕಾಶ್ಮೀರದ ಆಥರ್ ಆಮಿರುಲ್ ಶಾಫಿ ಖಾನ್ 1,018(ಶೇ.50.27) ಅಂಕಗಳನ್ನು ಪಡೆದಿದ್ದಾರೆ. ಮೂರನೆ ರ್ಯಾಂಕ್ ವಿಜೇತ ಜಸ್ಮೀತ್ ಸಿಂಗ್ ಸಂಧು 1,014(50.07) ಅಂಕ ಗಳಿಸಿದ್ದಾರೆಂದು ಅದು ಹೇಳಿದೆ.
ಖಾನ್, ಭಾರತೀಯ ರೈಲ್ವೆಯ ಸಂಚಾರ ಸೇವಾ(ಐಆರ್‌ಟಿಎಸ್) ಅಧಿಕಾರಿಯಾಗಿದ್ದರೆ, ಸಂಧು ಭಾರತೀಯ ಕಂದಾಯ ಸೇವಾ(ಕಸ್ಟಂಸ್ ಮತ್ತು ಸೆಂಟ್ರಲ್ ಎಕ್ಸೈಸ್) ಅಧಿಕಾರಿಯಾಗಿದ್ದಾರೆ. ಇಬ್ಬರೂ ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣರಾಗುವ ಮುನ್ನ ತರಬೇತಿ ಪಡೆಯುತ್ತಿದ್ದರು.
499 ಸಾಮಾನ್ಯ ವರ್ಗ, 314 ಇತರ ಹಿಂದುಳಿದ ವರ್ಗಗಳು, 173 ಪರಿಶಿಷ್ಟ ಜಾತಿ ಹಾಗೂ 89 ಪರಿಶಿಷ್ಟ ಪಂಗಡಗಳಿಂದ ಸೇರಿದಂತೆ ಒಟ್ಟು 1,078 ಅಭ್ಯರ್ಥಿಗಳು ಮೇ 6ರಂದು ಪ್ರಕಟಿಸಲಾಗಿರುವ 2015ರ ನಾಗರಿಕ ಸೇವಾ ಪರೀಕ್ಷೆಯ ಆಧಾರದಲ್ಲಿ ಕೇಂದ್ರ ಸರಕಾರದ ವಿವಿಧ ಸೇವೆಗಳಿಗೆ ನೇಮಕಾತಿ ಹೊಂದಲು ಶಿಫಾರಸು ಮಾಡಲ್ಪಟ್ಟಿದ್ದಾರೆ. 172 ಅಭ್ಯರ್ಥಿಗಳು ಕಾಯುವಿಕೆಯ ಪಟ್ಟಿಯಲ್ಲಿದ್ದಾರೆ.







