2015ರಲ್ಲಿ ಉದ್ಯೋಗ ಸೃಷ್ಟಿ ಕುಸಿತ: ಮೀನಾಕ್ಷಿ ಸುಂದರಂ
ಸಿಐಟಿಯು ಉಡುಪಿ ಜಿಲ್ಲಾ 5ನೆ ಸಮ್ಮೇಳನ ಉದ್ಘಾಟನೆ

ಉಡುಪಿ, ಮೇ 15: ಕಳೆದ ಆರು ವರ್ಷಗಳಲ್ಲಿ 2015 ಅತಿಕಡಿಮೆ ಉದ್ಯೋಗ ಸೃಷ್ಟಿ ಮಾಡಿದ ವರ್ಷ ಎಂಬುದಾಗಿ ಕೇಂದ್ರ ಸರಕಾರದ ಕಾರ್ಮಿಕ ಇಲಾಖೆ ನಡೆಸಿರುವ ಸರ್ವೇಯಿಂದ ತಿಳಿದುಬಂದಿದೆ. ಈ ವರ್ಷ ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ. ಕೈಗಾರಿಕೆಗಳಲ್ಲೂ ಉದ್ಯೋಗಗಳು ಸಂಪೂರ್ಣ ಕುಸಿತ ಕಂಡಿದೆ ಎಂದು ಸಿಐಟಿಯು ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಆತಂಕ ವ್ಯಕ್ತಪಡಿಸಿದ್ದಾರೆ.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ ಸಿಐಟಿಯು 5ನೆ ಜಿಲ್ಲಾ ಸಮ್ಮೇಳನವನ್ನು ರವಿವಾರ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಎರಡು ವರ್ಷಗಳಲ್ಲಿ ಭಾರತೀಯ ಬಹುರಾಷ್ಟ್ರೀಯ ಕಂಪೆನಿಗಳ ಆಸ್ತಿಯು ಎರಡು ಪಟ್ಟು ಜಾಸ್ತಿಯಾಗಿದೆ. ಆದರೆ ಅವರ ಕಂಪೆನಿಗಳಲ್ಲಿ ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ. ಇದರಿಂದ ವೇತನ ಕಡಿಮೆಯಾಗಿ, ವ್ಯವಹಾರ ಇಳಿಮುಖವಾಗಿದೆ. ಉದ್ಯೋಗ ಸೃಷ್ಟಿಯಾಗದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ ದೇಶದ ಶೇ.50ರಷ್ಟು ಆಸ್ತಿ ಕೇವಲ ಶೇ.1ರಷ್ಟು ಜನಸಂಖ್ಯೆಯ ಕೈಯಲ್ಲಿದೆ ಎಂದರು.
ಅಂಕಿಅಂಶ ಇಲಾಖೆಯ ಪ್ರಕಾರ ತಂಬಾಕು ಉತ್ಪಾದನೆಯಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ.19ರಷ್ಟು ಏರಿಕೆಯಾಗಿದೆ. ಆದರೆ ಬೀಡಿ ಕಂಪೆನಿಗಳು ಬೀಡಿ ಕಾರ್ಮಿಕರಿಗೆ ತುಟ್ಟಿ ಭತ್ತೆ ನೀಡುತ್ತಿಲ್ಲ. ವೇತನ ಆಯೋಗದ ಶಿಫಾರಸಿನ ಪ್ರಕಾರ ಭಾರತದಲ್ಲಿ ಒಬ್ಬ ಯೋಗ್ಯವಾಗಿ ಜೀವನ ನಡೆಸಲು ಆತನಿಗೆ ಮಾಸಿಕ 18 ಸಾವಿರ ರೂ. ಸಂಬಳ ಇರಬೇಕು. ಬಡವರು ಕೂಡ ಇಂದು ನೀರಿಗೆ ಹಣ ಕೊಟ್ಟು ಕುಡಿಯುವ ಪರಿಸ್ಥಿತಿ ಇದೆ. ಅದೇ ರೀತಿ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಆದರೆ ಈ ಶಿಫಾರಸನ್ನು ಜಾರಿ ಗೊಳಿಸಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ ಎಂದು ಅವರು ದೂರಿದರು.
ಉತ್ತರಾಖಂಡದಲ್ಲಿದ್ದ ಪ್ರಜಾಪ್ರಭುತ್ವ ಸರಕಾರವನ್ನು ಉರುಳಿಸುವುದಕ್ಕಾಗಿ ಕೇಂದ್ರದ ಮೋದಿ ಸರಕಾರವು ರಾಷ್ಟ್ರಪತಿ ಆಡಳಿತದ ಕುರಿತ ಹೈಕೋರ್ಟ್ ತಡೆಯಾಜ್ಞೆ ವಿರುದ್ಧ ಕೇವಲ 18 ಗಂಟೆಗಳೊಳಗೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತಂದಿದೆ. ಆದರೆ ಕೇಂದ್ರ ಸರಕಾರ ಬೋನಸ್ ಜಾಸ್ತಿ ಮಾಡಿರುವುದಕ್ಕಾಗಿ ಕೇರಳ, ತಮಿಳುನಾಡು, ಕರ್ನಾಟಕ ಸರಕಾರ ತಡೆಯಾಜ್ಞೆ ನೀಡಿ ಹಲವು ಸಮಯ ಕಳೆದರೂ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೇಂದ್ರ ಸರಕಾರಕ್ಕೆ ಪುರುಸೊತ್ತೇ ಇಲ್ಲ. ಕೇಂದ್ರ ಸರಕಾರ ಇಡೀ ದೇಶವನ್ನು ಸೊಮಾಲಿಯ ಮಾಡಲು ಹೊರಟಿದೆ ಎಂದು ಅವರು ಟೀಕಿಸಿದರು. ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಶಂಕರ್ ಧ್ವಜಾರೋಹಣ ನೆರವೇರಿಸಿದರು. ವೇದಿಕೆಯಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಪಿ.ವಿಶ್ವನಾಥ್ ರೈ, ಸಿಐಟಿಯು ಮುಖಂಡರಾದ ಎಚ್.ನರಸಿಂಹ, ಶಶಿಧರ್ ಗೊಲ್ಲ, ಕೆ.ಲಕ್ಷ್ಮಣ್, ಮಹಾಬಲ ವಡೇರಹೋಬಳಿ, ಎಐಟಿಯುಸಿನ ಕೆ.ವಿ.ಭಟ್ ಉಪಸ್ಥಿತರಿದ್ದರು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಐಟಿಯು ಕುಂದಾಪುರ ತಾಲೂಕು ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಕಾರ್ಯಕ್ರಮ ನಿರೂಪಿಸಿದರು.







