ಕೇರಳ, ತ.ನಾಡು, ಪುದುಚೇರಿಗಳಲ್ಲಿ ಇಂದು ಚುನಾವಣೆ
ಬಹುಕೋನ ಸ್ಪರ್ಧೆಯಲ್ಲಿ ಸೆಣಸುತ್ತಿರುವ ಪಕ್ಷಗಳು
ಚೆನ್ನೈ/ತಿರುವನಂತಪುರ,ಮೇ 15: ತಮಿಳುನಾಡು ಮತ್ತು ಕೇರಳ ವಿಧಾನಸಭೆಗಳಿಗೆ ಚುನಾವಣೆ ನಾಳೆ ನಡೆಯಲಿದ್ದು, ಮುಖ್ಯಮಂತ್ರಿಗಳಾದ ಜೆ.ಜಯಲಲಿತಾ ಮತ್ತು ಉಮ್ಮನ್ ಚಾಂಡಿ ಮತ್ತು ಆಯಾ ರಾಜ್ಯಗಳಲ್ಲಿ ಅವರ ಬದ್ಧಶತ್ರುಗಳಾದ ಎಂ.ಕರುಣಾನಿಧಿ ಮತ್ತು ವಿ.ಎಸ್.ಅಚ್ಯುತಾನಂದನ್ ಅವರ ಹಣೆಬರಹ ನಿರ್ಧಾರವಾಗಲಿದೆ. ಕರುಣಾನಿಧಿ ಮತ್ತು ಅಚ್ಯುತಾನಂದನ್ ಅವರ ವಯಸ್ಸು 90 ದಾಟಿದ್ದು ಅಭ್ಯರ್ಥಿಗಳಾಗಿ ಅವರ ಪಾಲಿಗೆ ಇದೇ ಕೊನೆಯ ಚುನಾವಣೆಯಾಗಬಹುದು. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಬಹುಕೋನ ಸ್ಪರ್ಧೆ ಏರ್ಪಟ್ಟಿದೆ. ಪುದುಚೇರಿಯಲ್ಲಿಯೂ ನಾಳೆಯೇ ಮತದಾನ ನಡೆಯಲಿದೆ.
ಪ.ಬಂಗಾಲ,ಅಸ್ಸಾಂ,ತಮಿಳುನಾಡು ಕೇರಳ ಮತ್ತು ಪುದುಚೇರಿಗಳಲ್ಲಿ ಮತಗಳ ಎಣಿಕೆ ಮೇ 19ರಂದು ನಡೆಯಲಿದ್ದು, ಫಲಿತಾಂಶ ಅಂದೇ ಹೊರಬೀಳಲಿದೆ.
ತಮಿಳುನಾಡು ಮತ್ತು ಕೇರಳ ವಿಧಾನಸಭೆಗಳಲ್ಲಿ ಪ್ರವೇಶ ಪಡೆಯಲು ಬಿಜೆಪಿ ಹರಸಾಹಸ ನಡೆಸುತ್ತಿದೆ. ದಶಕಗಳಿಂದಲೂ ಈ ಎರಡೂ ರಾಜ್ಯಗಳಲ್ಲಿ ಅಧಿಕಾರದ ಗದ್ದುಗೆ ಡಿಎಂಕೆ ಮತ್ತು ಎಡಿಎಂಕೆ ಹಾಗೂ ಯುಡಿಎಫ್ ಮತ್ತು ಎಲ್‌ಡಿಎಫ್ ನಡುವೆ ಬದಲಾಗುತ್ತಲೇ ಬಂದಿದೆ.
ತಮಿಳುನಾಡಿನಲ್ಲಿ ಎಡಿಎಂಕೆ ಅಧಿನಾಯಕಿ ಜಯಲಲಿತಾ ಮತ್ತು ಗಾಲಿಕುರ್ಚಿಗೆ ಅಂಟಿಕೊಂಡಿರುವ ಡಿಎಂಕೆ ನಾಯಕ ಕರುಣಾನಿಧಿ(91) ಅವರೊಂದಿಗೆ ಡಿಎಂಡಿಕೆಯ ನಟ-ರಾಜಕಾರಣಿ ವಿಜಯಕಾಂತ್ ಮತ್ತು ಪಿಎಂಕೆಯ ಅನ್ಬುಮಣಿ ರಾಮದಾಸ್ ಅವರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. ನಾಳೆ ಮತದಾನ ನಡೆಯಲಿರುವ 233 ವಿಧಾನಸಭಾ ಸ್ಥಾನಗಳಿಗೆ ಒಟ್ಟು 3,740 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ ಕರೂರು ಜಿಲ್ಲೆಯ ಅರವಕುರಿಚಿ ಕ್ಷೇತ್ರದಲ್ಲಿ ಅಕ್ರಮಗಳ ದೂರುಗಳ ಹಿನ್ನೆಲೆಯಲ್ಲಿ ಮತದಾನವನ್ನು ಮೇ 23ಕ್ಕೆ ಮುಂದೂಡಲಾಗಿದೆ. ಆ ಕ್ಷೇತ್ರದ ಮತಗಳ ಎಣಿಕೆ ಮೇ 25ರಂದು ನಡೆಯಲಿದೆ.
ತಮಿಳುನಾಡಿನಲ್ಲಿ ಚುನಾವಣಾ ಅಧಿಕಾರಿಗಳು 100 ಕೋ.ರೂ.ಗೂ ಅಧಿಕ ಅಕ್ರಮ ಹಣವನ್ನು ವಶಪಡಿಸಿಕೊಂಡಿದ್ದು, ಇದು ವಿಧಾನಸಭಾ ಚುನಾವಣೆಗಳು ನಡೆಯುತ್ತಿರುವ ಐದು ರಾಜ್ಯಗಳಲ್ಲಿಯೇ ಗರಿಷ್ಠ ಮೊತ್ತವಾಗಿದೆ.
ರಾಜ್ಯದಲ್ಲಿನ 65,000ಕ್ಕೂ ಆಧಿಕ ಮತಗಟ್ಟೆಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಜಯಲಲಿತಾ ಸ್ಪಧಿಸಿರುವ ಚೆನ್ನೈನ ಆರ್.ಕೆ.ನಗರ ಕ್ಷೇತ್ರದಲ್ಲಿ ಗರಿಷ್ಠ ಸಂಖ್ಯೆ(45)ಯ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬಿಜೆಪಿಯು ಕೆಲವು ಸಣ್ಣಪುಟ್ಟ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣಾ ಕಣದಲ್ಲಿದ್ದು,ಅದರ ಅಭ್ಯರ್ಥಿಗಳಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಎಚ್.ರಾಜಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ತಮಿಳ್ಳಿಸೈ ಸೌಂದರರಾಜನ್‌ಅವರು ಸೇರಿದ್ದಾರೆ.
ಇತ್ತ ಕೇರಳದಲ್ಲಿ 140 ಸ್ಥಾನಗಳಿಗೆ 109 ಮಹಿಳೆಯರು ಸೇರಿದಂತೆ ಒಟ್ಟು 1,203 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚಾಂಡಿ,ಅಚ್ಯುತಾನಂದನ್ ಜೊತೆಗೆ ಸಿಪಿಎಂನ ಪಿಣರಾಯಿ ವಿಜಯನ್,ಗೃಹಸಚಿವ ರಮೇಶ ಚೆನ್ನಿತ್ತಲ(ಕಾಂಗ್ರೆಸ್),ಮುಸ್ಲಿಂ ಲೀಗ್ ನಾಯಕ ಹಾಗೂ ಕೈಗಾರಿಕಾ ಸಚಿವ ಪಿ.ಕುಂಞಾಲಿಕುಟ್ಟಿ,ಮಾಜಿ ವಿತ್ತ ಸಚಿವ ಕೆ.ಎಂ.ಮಣಿ(ಕೇರಳ ಕಾಂಗ್ರೆಸ್-ಎಂ), ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್, ಮಾಜಿ ಕೇಂದ್ರ ಸಚಿವ ಒ.ರಾಜಗೋಪಾಲ ಮತ್ತು ಮಾಜಿ ಕ್ರಿಕೆಟಿಗ ಶ್ರೀಶಾಂತ್ ಸೇರಿದಂತೆ ಪ್ರಮುಖ ಅಭ್ಯರ್ಥಿಗಳ ಹಣೆಬರಹವನ್ನು ಮತದಾರ ಪ್ರಭುಗಳು ನಾಳೆ ಬರೆಯಲಿದ್ದಾರೆ. ಅಂದ ಹಾಗೆ ಮಾಲಿವುಡ್‌ನ ಕೆಲವು ತಾರೆಯರೂ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.







