ಮುಂಗಾರು ವಿಳಂಬ ಸಾಧ್ಯತೆ; ಕೇರಳಕ್ಕೆ ಜೂ.7ರಂದು ಆಗಮಿಸುವ ನಿರೀಕ್ಷೆ

ಹೊಸದಿಲ್ಲಿ, ಮೇ 15: ಕೇರಳಕ್ಕೆ ಮುಂಗಾರು ಮಳೆಯ ಆಗಮನ ನಿಗದಿತ ಜೂ.1ಕ್ಕಿಂತ 6 ದಿನ ವಿಳಂಬವಾಗುವ ನಿರೀಕ್ಷೆಯಿದೆಯೆಂದು ಹವಾಮಾನ ಇಲಾಖೆಯು ಇಂದಿನ ಮುನ್ಸೂಚನೆಯಲ್ಲಿ ತಿಳಿಸಿದೆ.
ಇದರಿಂದಾಗಿ ದೇಶದ ಇತರ ಭಾಗಗಳಿಗೂ ಮುಂಗಾರು ತಡವಾಗಿ ಆಗಮಿಸುವ ಸಂಭವವಿದೆ.
ಈ ವರ್ಷ ಕೇರಳಕ್ಕೆ ಮುಂಗಾರು ಮಾರುತ ಸ್ವಲ್ಪ ತಡವಾಗಿ ಆಗಮಿಸುವ ಮುನ್ಸೂಚನೆಯಿದೆ. ನೈಋತ್ಯ ಮಾನ್ಸೂನ್ ಕೇರಳಕ್ಕೆ ಜೂ.7ರಂದು ಕಾಲಿರಿಸುವ ನಿರೀಕ್ಷೆಯಿದೆ. ಅದು ನಾಲ್ಕು ದಿನ ಆಚೀಚೆ ಆಗಬಹುದೆಂದು ಇಂದು ಬಿಡುಗಡೆ ಮಾಡಿರುವ ಮುಂಗಾರು ಮುನ್ಸೂಚನೆಯಲ್ಲಿ ಹವಾಮಾನ ಇಲಾಖೆ ತಿಳಿಸಿದೆ.
ಕುತೂಹಲದ ವಿಷಯವೆಂದರೆ, ಕಳೆದ 11 ವರ್ಷಗಳಲ್ಲಿ ನೀಡಿದ್ದ ಮುಂಗಾರು ಆರಂಭದ ಮುನ್ಸೂಚನೆಯು 2015ನ್ನು ಹೊರತುಪಡಿಸಿ ಸಂಪೂರ್ಣ ಸರಿಯಾಗಿತ್ತು.
ಮುಂಗಾರು ವಿಳಂಬ ‘ಅಸಹಜವೇನಲ್ಲ’ ವೆಂದು ಐಎಂಡಿ ನಿರ್ದೇಶಕ ಲಕ್ಷ್ಮಣ ಸಿಂಗ್ ರಾಥೋರ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆಯಿರುವು ದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಭಾರೀ ಸೆಕೆಯಿಂದ ಸ್ವಲ್ಪ ಬಿಡುಗಡೆ ಸಿಗಬಹುದೆಂದು ಅವರು ತಿಳಿಸಿದ್ದಾರೆ. ಪ್ರಸ್ತುತ ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶವೊಂದಿದ್ದು, ಅದು ವಾಯುಭಾರ ಕುಸಿತವಾಗಿ ಮಾರ್ಪಾಡಾಗಿ ಇಂದು ರಾತ್ರಿಯೊಳಗೆ ತಮಿಳುನಾಡಿನ ತೀರವನ್ನು ಅಪ್ಪಳಿಸಬಹುದು. ಅದರಿಂದ ತಮಿಳುನಾಡು, ಕರ್ನಾಟಕದ ದಕ್ಷಿಣ ಒಳ ನಾಡು ಹಾಗೂ ಕೇರಳದ ಕೆಲವು ಭಾಗಗಳಲ್ಲಿ ಉತ್ತಮ ಪ್ರಮಾಣದ ಮಳೆ ಯಾಗಬಹುದೆಂದು ರಾಥೋರ್ ಹೇಳಿದ್ದಾರೆ.
ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್, ಮೇ 28ರಿಂದ 30ರೊಳಗೆ ಕೇರಳಕ್ಕೆ ಮುಂಗಾರು ಆಗಮಿಸಲಿದೆಯೆಂದು ಭವಿಷ್ಯ ನುಡಿದಿದೆ. ಈ ವರ್ಷ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಈಗಾಗಲೇ ನೀಡಿದೆ.







