ಕಾಸರಗೋಡು: ಇಂದು ಚುನಾವಣೆ
ಕಾಸರಗೋಡು, ಮೇ 15: ಕೇರಳ ರಾಜ್ಯ ವಿಧಾನಸಭಾ ಚುನಾವಣೆ ಮೇ 16ರಂದು ನಡೆಯಲಿದ್ದು, ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 9,90,513 ಮಂದಿ ತಮ್ಮ ಹಕ್ಕು ಚಲಾಯಿಸುವರು. ಬೆಳಗ್ಗೆ 7ರಿಂದ ಸಂಜೆ 6ರ ತನಕ ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ 799 ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. 26 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಎಂದು ಗುರುತಿಸಲಾಗಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಮಹಿಳಾ ಸಿಬ್ಬಂದಿ ಮಾತ್ರ ಇರುವ ಹತ್ತು ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಇದರ ಜೊತೆಗೆ 30 ಮಾದರಿ ಮತಗಟ್ಟೆಗಳು ಕಾರ್ಯಾಚರಿಸಲಿವೆ. ವಿಧಾನಸಭೆ ಚುನಾವಣೆ ಅಂಗವಾಗಿ ಮತಯಂತ್ರ ಸಾಮಗ್ರಿಗಳ ವಿತರಣೆ ಇಂದು ನಡೆದಿದ್ದು, ಆಯಾ ಮತಗಟ್ಟೆಗೆ ತಲುಪಿಸಲಾಗಿದೆ. ನಕಲಿ ಮತದಾನ ತಡೆಯುವುದಕ್ಕಾಗಿ ಸೂಕ್ತ ರೀತಿಯ ಭದ್ರತೆ ಕಲ್ಪಿಸಲಾಗಿದೆ. ನೂರರಷ್ಟು ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 46 ಅಭ್ಯರ್ಥಿಗಳಿದ್ದಾರೆ. ಮಂಜೇಶ್ವರ 8, ಕಾಸರಗೋಡು 7, ಉದುಮ 10, ಕಾಞಂಗಾಡ್ 12 ಮತ್ತು ತ್ರಿಕ್ಕರಿಪುರದಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದು, ಎಲ್ಲ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷಿಸಲಾಗಿದೆ.





