ಎಸೆಸೆಲ್ಸಿ ಫಲಿತಾಂಶ: ಟ್ಯೂಷನ್ ಪಡೆಯದ ವಿದ್ಯಾರ್ಥಿನಿ ಬಿಂದ್ಯಾ ಶೆಟ್ಟಿಗೆ 620 ಅಂಕ
ಮಂಗಳೂರು, ಮೇ 16: ಮಂಗಳೂರು ತಾಲೂಕಿನ ಸುರತ್ಕಲ್ನ ಬಿಂದ್ಯಾ ಶೆಟ್ಟಿ ಎಸೆಸೆಲ್ಸಿ ಪರೀಕ್ಷೆಯಲ್ಲಿ 620 ಅಂಕಗಳನ್ನು ಪಡೆದಿದ್ದಾರೆ. ಬಿಂದ್ಯಾ ಶೆಟ್ಟಿ ಸುರತ್ಕಲ್ ಮಹಾಲಿಂಗೇಶ್ವರ ಇಂಗ್ಲೀಷ್ ಮೀಡಿಯಂ ಸ್ಕೂಲ್ನ ವಿದ್ಯಾರ್ಥಿನಿಯಾಗಿದ್ದು 99.20 ಶೇ. ಅಂಕವನ್ನು ಪಡೆದಿದ್ದಾರೆ.
ಕನ್ನಡದಲ್ಲಿ 125, ಇಂಗ್ಲೀಷ್ನಲ್ಲಿ 99, ಹಿಂದಿಯಲ್ಲಿ 100, ಗಣಿತದಲ್ಲಿ 100, ವಿಜ್ಞಾನದಲ್ಲಿ 96, ಸಮಾಜ ವಿಜ್ಞಾನದಲ್ಲಿ 100 ಅಂಕವನ್ನು ಪಡೆದಿದ್ದಾರೆ.
ಭರತನಾಟ್ಯ, ಯಕ್ಷಗಾನ, ನೃತ್ಯದಲ್ಲಿ ಆಸಕ್ತಿಯುಳ್ಳ ಬಿಂದ್ಯಾ, ಉದ್ಯಮಿ ಲೀಲಾಧರ್ ಶೆಟ್ಟಿಯವರ ಪುತ್ರಿ.
ಟ್ಯೂಷನ್ಗೆ ಹೋಗದೆ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ
ಬಿಂದ್ಯಾ ಶೆಟ್ಟಿ ಯಾವುದೆ ಟ್ಯೂಷನ್ ಕಲಿಕಾ ಕೇಂದ್ರಗಳಿಗೆ ಹೋಗದೆ ಅತ್ಯಧಿಕ ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲಿಕೆಯ ಜೊತೆಗೆ ಕಲಾಸಕ್ತರಾಗಿರುವ ಬಿಂದ್ಯಾ ಶೆಟ್ಟಿಗೆ ಉಚಿತವಾಗಿ ಟ್ಯೂಷನ್ ಪಡೆಯುವ ಅವಕಾಶ ಸಿಕ್ಕಿದರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು. ತನ್ನ ಶಾಲೆಯಲ್ಲಿ ಕಲಿತ ವಿದ್ಯಾಭ್ಯಾಸದಲ್ಲಿ ಅತ್ಯಧಿಕ ಅಂಕ ಗಳಿಸುವ ವಿಶ್ವಾಸವನ್ನು ಹೊಂದಿದ್ದರು.