ಆಳ್ವಾಸ್ ಕನ್ನಡ, ಆಂಗ್ಲ ಮಾಧ್ಯಮ ಶಾಲೆಗೆ ಸತತ 6ನೆ ವರ್ಷ 100 ಶೇ. ಫಲಿತಾಂಶ
ಮೂಡುಬಿದಿರೆ, ಮೇ 16: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರವರ್ತಿತ ಆಳ್ವಾಸ್ ಕನ್ನಡ ಮಾಧ್ಯಮ ಮತ್ತು ಆಳ್ವಾಸ್ ಆಂಗ್ಲಮಾಧ್ಯಮ ಪ್ರೌಢಶಾಲೆಗಳ ಎಲ್ಲ 381 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.60ಕ್ಕಿಂತ ಅಧಿಕ ಅಂಕ ಗಳಿಸುವ ಮೂಲಕ ಸತತ 6ನೆ ವರ್ಷ 100 ಶೇ. ಫಲಿತಾಂಶ ದಾಖಲಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚಿನ್ಮಯ (ಕನ್ನಡ ಮಾಧ್ಯಮ) 619 ಅಂಕ ಗಳಿಸಿ ಸಂಸ್ಥೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಸುಪ್ರೀತಾ ಸಂತೋಷ್ ಶೆಟ್ಟಿ, ಕಾವ್ಯ ಆರಾಧ್ಯ ತಲಾ 618 (ಇಬ್ಬರೂ ಆಂಗ್ಲ), ಚೆನ್ನವೀರ ವೀರೇಶ, ಲಕ್ಷ್ಮೀಕಾಂತ್ ಮತ್ತು ರಶ್ಮಿ ಬಾಬು ಮುಗೇರ ತಲಾ 617 (ಎಲ್ಲರೂ ಕನ್ನಡ ಮಾಧ್ಯಮ)ಅಂಕ ಗಳಿಸಿದ್ದಾರೆ. 17 ಮಂದಿ 610ಕ್ಕಿಂತ ಮೇಲ್ಪಟ್ಟು ಅಂಕ (ಕನ್ನಡ ಮಾಧ್ಯಮದಲ್ಲಿ 12 , ಆಂಗ್ಲ ಮಾದ್ಯಮದಲ್ಲಿ 5 ಮಂದಿ) ಪಡೆದಿದ್ದಾರೆ. 255 ಮಂದಿ 564ಕ್ಕಿಂತ ಅಧಿಕ (ವಿಶಿಷ್ಟ ಶ್ರೇಣಿಯಲ್ಲಿ) ಅಂಕ ಪಡೆದಿದ್ದಾರೆ ಎಂದು ಅವರು ತಿಳಿಸಿದರು.
ಶತಾಂಶ ಅಂಕ ಗಳಿಕೆ:
ಕನ್ನಡ ಭಾಷೆಯಲ್ಲಿ 8 ಮಂದಿ 125ರಲ್ಲಿ 125, ಇಂಗ್ಲಿಷ್ನಲ್ಲಿ 4, ಹಿಂದಿಯಲ್ಲಿ 23, ಸಂಸ್ಕೃತದಲ್ಲಿ 6, ಗಣಿತದಲ್ಲಿ 15, ಸಾಮಾಜಿಕ ವಿಜ್ಞಾನದಲ್ಲಿ 13 ಮಂದಿ 100ಕ್ಕೆ 100 ಅಂಕ ಗಳಿಸಿದ್ದಾರೆ.
ಆಳ್ವಾಸ್ ಹೈಸ್ಕೂಲು ಶೈಕ್ಷಣಿಕವಾಗಿ ಮಾತ್ರವಲ್ಲ ಕ್ರೀಡೆಯಲ್ಲೂ ಮುಂಚೂಣಿಯಲ್ಲಿದ್ದು ಸಾಂಸ್ಕೃತಿಕ ರಂಗದಲ್ಲೂ ವಿಶಿಷ್ಟ ಸಾಧನೆ ಮೆರೆಯುತ್ತ ಬಂದಿದೆ. ಚಿನ್ಮಯ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಎರಡು ಬಾರಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಉತ್ತರ ಕನ್ನಡ ಜಿಲ್ಲಾ ಮೂಲದ ಕೃಷಿಕ ಗಜಾನನ ಭಟ್ ಅವರ ಪುತ್ರ ಎಂದು ಮೋಹನ್ ಆಳ್ವ ತಿಳಿಸಿದರು.