ಈ ಅರಬಿ ಯಾರು ಗೊತ್ತೇ ?

ಮಂಗಳೂರು ಉತ್ತರ ಶಾಸಕ ಬಿ ಎ ಮೊಯ್ದಿನ್ ಬಾವಾ ಅವರು ಗರಿಗರಿ ಉಡುಗೆ ತೊಡುಗೆ ತೊಡುವುದರಲ್ಲಿ ಸದಾ ಮುಂದು. ತಾನು ಭಾಗವಹಿಸುವ ಕಾರ್ಯಕ್ರಮಕ್ಕೆ, ಅಲ್ಲಿಗೆ ಬರುವ ಅತಿಥಿಗಳು , ಸಭಿಕರಿಗೆ ತಕ್ಕಂತೆ ವೇಷ ಭೂಷಣ ತೊಟ್ಟು ಎಲ್ಲರ ಗಮನ ಸೆಳೆಯುವಲ್ಲಿ ಮೊಯ್ದಿನ್ ಬಾವಾರನ್ನು ಹಿಂದಿಕ್ಕುವ ರಾಜಕಾರಣಿಗಳು ಕರಾವಳಿಯಲ್ಲಿ ಯಾರೂ ಇಲ್ಲ. ಶುಕ್ರವಾರ ಅವರ ಕ್ಷೇತ್ರದ ಕಾಟಿಪಳ್ಳದಲ್ಲಿ ಮಿಸ್ಬಾಹ್ ಮಹಿಳಾ ಕಾಲೇಜು ಉದ್ಘಾಟನೆ ಕಾರ್ಯಕ್ರಮವಿತ್ತು . ಇದಕ್ಕೆ ಗಲ್ಫ್ ದೇಶಗಳಿಂದಲೂ ಗಣ್ಯರು, ಉದ್ಯಮಿಗಳು ಬಂದಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಮೊಯ್ದಿನ್ ಬಾವಾ ಅವರದ್ದು.
ಇದಕ್ಕೆ ಯಾವುದೇ ರಾಜಿ ಮಾಡಿಕೊಳ್ಳದೆ ಪಕ್ಕಾ ಅರಬ್ ಗಣ್ಯರ ಉಡುಪಿನಲ್ಲಿ ಹಾಜರಾದರು ಶಾಸಕರು ! ಅರಬರು ತೊಡುವ ಉದ್ದದ ನಿಲುವಂಗಿ ( ಕಂದೂರ) , ತಲೆಗೆ ಕೆಂಪು-ಬಿಳಿ ಚೌಕಗಳ ಶಾಲು, ಅದು ಸ್ಥಿರವಾಗಿ ನಿಲ್ಲುವಂತೆ ಅರಬರು ಇಟ್ಟುಕೊಳ್ಳುವ ಕಪ್ಪು ಪಟ್ಟಿ ಎಲ್ಲವೂ ಒಂದಕ್ಕೊಂದು ಒಪ್ಪವಾಗಿ ಮೊಯ್ದಿನ್ ಬಾವಾರನ್ನು ಅಲಂಕರಿಸಿದ್ದವು. ಕಾರ್ಯಕ್ರಮಕ್ಕೆ ಬಂದ ಅರಬರಿಗಿಂತ ಮೊಯ್ದಿನ್ ಬಾವಾ ಬ್ಯಾರಿ ಸಾಹೇಬರೇ ಜನರ ಆಕರ್ಷಣೆಯ ಕೇಂದ್ರವಾದರು. !












