ನಿಧಾನಗತಿ ತನಿಖೆ ಖಂಡಿಸಿ ಕರವೇ ಪ್ರತಿಭಟನೆ
ಅನಧಿಕೃತ ಲಾಟರಿ ಮಾರಾಟದ ವಿರುದ್ಧ ದೂರು

ಕಾರವಾರ, ಮೇ 16: ತಾಲೂಕಿನಲ್ಲಿ ನಡೆದ ಕಾರವಾರ ಉತ್ಸವದಲ್ಲಿ ಅನಧಿಕೃತ ಲಾಟರಿ ಮಾರಾಟ ಮಾಡಿ ಕಾನೂನು ಉಲ್ಲಂಘಿಸಿರುವುದರ ಬಗ್ಗೆ ದೂರು ದಾಖಲಿಸಿದ್ದರೂ ಪೊಲೀಸರು ಸರಿಯಾಗಿ ತನಿಖೆ ನಡೆಸದೆ ನಿರ್ಲಕ್ಷ ವಹಿಸುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಕುಳಿತು ಸೋಮವಾರ ಮೌನ ಪ್ರತಿಭಟನೆ ನಡೆಸಿದರು.
ಇತ್ತೀಚೆಗೆ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ನಡೆದ ಕಾರವಾರ ಉತ್ಸವದಲ್ಲಿ ಕಾನೂನು ಬಾಹಿರವಾಗಿ ಲಾಟರಿ ಟಿಕೆಟ್ ಮಾರಾಟ ಮಾಡಲಾಗಿದೆ. ಅಲ್ಲದೆ ಕೊಟ್ಯಾಂತರ ರೂ. ಬೆಲೆಯ ಲಾಟರಿ ಪುಸ್ತಕಗಳನ್ನು ಅಧಿಕಾರಿಗಳಿಗೆ ನೀಡಿ ಅವರಿಂದ ಮಾರಾಟ ಮಾಡಿಸಲಾಗಿದೆ. ಈ ಬಗ್ಗೆ ಮೇ 4ರಂದು ದೂರು ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಆರಂಭದಲ್ಲಿ ಪಿಎಸ್ಸೈ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದರಾದರೂ ನಂತರ ಮೇ 13 ರಂದು ಗುನ್ನಾ ನಂ. 58/16 ರಲ್ಲಿ 7(111) ಲಾಟರಿ ರೆಗ್ಯುಲೇಶನ್ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಆದರೆ ಸಮಿತಿಯವರು ಲಾಟರಿ ಮೂಲಕ ಲಕ್ಷಾಂತರ ಜನರನ್ನು ವಂಚಿಸಿದರೂ ಅವರ ವಿರುದ್ಧ 420 ಅಡಿ ಪ್ರಕರಣ ದಾಖಲಿಸದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿದ್ದಾರೆ.
ಪ್ರಕರಣ ದಾಖಲಿಸಿ ಹಲವು ದಿನಗಳು ಕಳೆದರೂ ಈವರೆಗೆ ಯಾವೊಬ್ಬ ಆರೋಪಿಗಳನ್ನಾಗಲಿ ಟಿಕೆಟ್ ಪುಸ್ತಕಗಳನ್ನಾಗಲಿ ವಶಪಡಿಸಿಕೊಂಡಿಲ್ಲ. ಅಲ್ಲದೆ ಇದರಿಂದ ಸಂಗ್ರಹವಾದ ಹಣ ಎಷ್ಟು ಅದು ಎಲ್ಲಿದೆ, ಏನಾಗಿದೆ ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಿದಂತೆ ಕಂಡುಬರುತ್ತಿಲ್ಲ. ಆದರೆ ಇಂತಹ ಅನ್ಯ ಚಟುವಟಿಕೆಯಿಂದ ಅಧಿಕಾರಿಗಳು, ಸಾರ್ವಜನಿಕರು ಹಿಂಸೆ ಅನುಭವಿಸುವಂತಾಗಿದೆ. ಆದ್ದರಿಂದ ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣದ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ನಂತರ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಆದಷ್ಟು ಬೇಗ ಪ್ರಕರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ರಾಜೇಶ್ ನಾಯ್ಕ, ಸಂತೋಷ್ ನಾಯ್ಕ, ಗೌರೀಶ್, ನಾಗರಾಜ ಶೇಟ್, ಜಗದೀಶ್ ಮಡಿವಾಳ, ಸಂಜುಕುಮಾರ್ ಎಸ್., ಮಾರುತಿ, ವಿನಾಯಕ, ಸೂರಜ್ ಮತ್ತಿತರರು ಉಪಸ್ಥಿತರಿದ್ದರು.







