ಆರೋಗ್ಯದ ಸುಸ್ಥಿತಿಯ ಬಗ್ಗೆ ನಿಗಾ ವಹಿಸಿ: ಸಚಿವ ಕಿಮ್ಮನೆ

ತೀರ್ಥಹಳ್ಳಿ, ಮೇ 16: ಆರೋಗ್ಯ ಮತ್ತು ಶಿಕ್ಷಣದ ವಿಚಾರ ಬಂದಾಗ ನಾವು ಹೆಚ್ಚು ಜಾಗೃತರಾಗಬೇಕು. ತಮ್ಮ ತಮ್ಮ ಹೊಣೆಗಾರಿಕೆಯನ್ನು ಮರೆಯಬಾರದು. ಆರೋಗ್ಯದ ಸುಸ್ಥಿತಿಯ ಬಗ್ಗೆ ನಿಗಾ ವಹಿಸುವುದು ನಮ್ಮ ಕರ್ತವ್ಯ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಪಟ್ಟಣದ ಕೋಳಿಕಾಲುಗುಡ್ಡದ ಸರಕಾರಿ ಉರ್ದು ಪ್ರಾಥಮಿಕ ಶಾಲೆ ಯಲ್ಲಿ ನಡೆದ ತಾಲೂಕು ಸಂಯುಕ್ತ ಮುಸ್ಲಿಮ್ ಒಕ್ಕೂಟ ಆಯೋಜಿಸಿದ್ದ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಯೆನೆಪೋಯ ಹೆಲ್ತ್ ಕಾರ್ಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರಕಾರ ಆರೋಗ್ಯದ ಹತ್ತಾರು ಯೋಜನೆಗಳನ್ನು ರೂಪಿಸಿ ಜನಸಾಮಾನ್ಯರಿಗೆ ತಲುಪಿಸಿದೆ. ಅಂತಹ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು. ಶಿಕ್ಷಣದ ವಿಚಾರದಲ್ಲಿ ಅಲ್ಪಸಂಖ್ಯಾತರು ಹೆಚ್ಚು ಒತ್ತು ಕೊಡಬೇಕಾಗಿದೆ. ಶಾಲಾ ಮಕ್ಕಳಿಗಾಗಿ ರಾಜ್ಯ ಸರಕಾರದ ಹಲವು ಯೋಜನೆಗಳು ಯಶಸ್ವಿ ಯೋಜನೆಗಳಾಗಿವೆ ಎಂದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಹಾಜಿ ಸುಲೇಮಾನ್ ಸಾಹೇಬ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಹಾಗೂ ಮುಸ್ಲಿಮ್ ಒಕ್ಕೂಟದ ಗೌರವಾಧ್ಯಕ್ಷ ಇಬ್ರಾಹೀಂ ಶರ್ೀ, ಪಪಂ ಅಧ್ಯಕ್ಷ ರಹ್ಮತ್ತುಲ್ಲಾ ಅಸಾದಿ, ಒಕ್ಕೂಟದ ಉಪಾಧ್ಯಕ್ಷ ದಸ್ತಗೀರ್ ಖುರೇಷಿ, ಸಂಚಾಲಕ ಮುಹಮ್ಮದ್ ಇಬ್ರಾಹೀಂ ಹಾಗೂ ಮುಹಮ್ಮದ್ ಝರುಲ್ಲಾ ಉಪಸ್ಥಿತರಿದ್ದರು.







