ನಿಯಮ ಉಲ್ಲಂಘಿಸಿದ ಆಟೊ ಚಾಲಕರಿಗೆ ಕೇಸ್
ಮೀಟರ್ ಅಳವಡಿಕೆ ಕಡ್ಡಾಯ

ಡಿವೈಎಸ್ಪಿ ಅರೆಸಿದ್ದಿ ನೇತೃತ್ವದಲ್ಲಿ ದಿಢೀರ್ ಕಾರ್ಯಾಚರಣೆ
ಶಿವಮೊಗ್ಗ, ಮೇ 16: ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಪ್ರಯಾಣಿಕ ಆಟೊಗಳಿಗೆ ಮೀಟರ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಕನಿಷ್ಠ ಪ್ರಯಾಣ ದರ ಕೂಡ ನಿಗದಿಗೊಳಿಸಲಾಗಿದೆ. ಆದರೆ ಕೆಲ ಆಟೊ ಚಾಲಕರು ಮೀಟರ್ ಹಾಕದೆ, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿತ್ತು. ಇತ್ತೀಚೆಗೆ ಈ ಸಂಬಂಧ ಸಂಘಟನೆಯೊಂದು ಎಸ್ಪಿಗೆ ಮನವಿ ಕೂಡ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಜಿಲ್ಲಾ ಪೊಲೀಸ್ ಇಲಾಖೆಯು ದಿಢೀರ್ ಆಗಿ ‘ಮೀಟರ್ ಆಫ್ ಆಪರೇಷನ್’ ಕಾರ್ಯಾಚರಣೆ ನಡೆಸಿತು. ಡಿವೈಎಸ್ಪಿ ಡಾ. ರಾಮ್‌ಎಲ್. ಅರೆಸಿದ್ದಿ ನೇತೃತ್ವದಲ್ಲಿ ಪ್ರಮುಖ ರಸ್ತೆ, ವೃತ್ತಗಳಲ್ಲಿ ಆಟೊಗಳ ಮೀಟರ್ ತಪಾಸಣೆ ನಡೆಸಲಾಯಿತು. ಪ್ರಯಾಣದ ವೇಳೆ ‘ಮೀಟರ್ ಆಫ್’ ಆಗಿದ್ದ ಆಟೊಗಳನ್ನು ಪೊಲೀಸರು ವಶಕ್ಕೆ ಪಡೆದು ದಂಡ ವಿಧಿಸಿದರು. ಸ್ವತಃ ಡಿವೈಎಸ್ಪಿ ಅರೆಸಿದ್ದಿಯವರು ಗೋಪಿ ವೃತ್ತದಲ್ಲಿ ಆಟೊಗಳ ಮೀಟರ್ ತಪಾಸಣೆ ನಡೆಸಿದರು. ಆಟೊದಲ್ಲಿ ಕುಳಿತ್ತಿದ್ದ ಪ್ರಯಾಣಿಕರಿಂದ ಪ್ರಯಾಣ ದರ ಹಾಗ
ೂ ಮೀಟರ್ ಹಾಕಲಾಗಿದೆಯೇ ಎಂಬುದರ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಮೀಟರ್ ಹಾಕದ ಹಲವು ಆಟೊಗಳನ್ನು ವಶಕ್ಕೆ ಪಡೆಯುವಂತೆ ತಮ್ಮ ಕೆಳಹಂತದ ಸಿಬ್ಬಂದಿಗೆ ಸೂಚಿಸುತ್ತಿದ್ದ ದೃಶ್ಯ ಕಂಡುಬಂದಿತು. *ತಬ್ಬಿಬ್ಬು: ಮೀಟರ್ ಹಾಕದೆ ಸಂಚರಿಸುತ್ತಿದ್ದ ಆಟೊ ಚಾಲಕರು ಪೊಲೀಸರ ದಿಢೀರ್ ಕಾರ್ಯಾಚರಣೆಯಿಂದ ತಬ್ಬಿಬ್ಬುಗೊಳ್ಳುವಂತಾಯಿತು. ಕೆಲ ಆಟೊ ಚಾಲಕರು ಪೊಲೀಸರನ್ನು ನೋಡಿ ಮೀಟರ್ ಚಾಲುಗೊಳಿಸುತ್ತಿದ್ದ ದೃಶ್ಯ ಕಂಡುಬಂದಿತು. ಮೀಟರ್ ಆನ್ ಮಾಡಿ ಆಟೊ ಚಲಾಯಿಸುತ್ತಿದ್ದ ಚಾಲಕರು ಮಾತ್ರ ಪೊಲೀಸರ ಕೈಯಿಂದ ಪಾರಾದರು.
46 ಕೇಸ್ ದಾ ಖಲು, 20 ಆಟೊಗಳು ಆರ್‌ಟಿಒ ವಶಕ್ಕೆ: ಸಂಚಾರದ ವೇಳೆ ಮೀಟರ್ ಹಾಕದೆ ಆಟೊ ಚಲಾಯಿಸುತ್ತಿದ್ದ ಆರೋಪದ ಮೇರೆಗೆ ಸೋಮವಾರ ಮಧ್ಯಾಹ್ನದವರೆಗೂ 46 ಕೇಸ್ ದಾಖಲಿಸಲಾಗಿದೆ. 20 ಆಟೋಗಳ್ನು ಆರ್‌ಟಿಒ ವಶಕ್ಕೆ ಒಪ್ಪಿಸಲಾಗಿದೆ. ಅವರೇ ಈ ಆಟೊ ಚಾಲಕರಿಗೆ ದಂಡ ವಿಧಿಸಲಿದ್ದಾರೆ. ಆಟೊ ಚಾಲಕರು ನಿಯಮ ಪಾಲನೆ ಮಾಡಬೇಕು. ಕಡ್ಡಾಯವಾಗಿ ಮೀಟರ್ ಹಾಕಿ ಆಟೋ ಚಲಾಯಿಸಬೇಕು. ನಿಗದಿತ ಪ್ರಯಾಣ ದರ ಮಾತ್ರ ಪಡೆಯಬೇಕು.
<ಡಿವೈಎಸ್ಪಿ ಡಾ. ರಾಮ್ ಎಲ್. ಅರೆಸಿದ್ದಿ







