ಪರಿಸರ ಸಂರಕ್ಷಣೆ ಕಾರ್ಯಾಗಾರ ನಡೆಸಲು ಇಲಾಖೆ ಮುಂದಾಗಲಿ: ಶಾಸಕ ಬಿ.ಬಿ. ನಿಂಗಯ್ಯ

ಮೂಡಿಗೆರೆ, ಮೇ 16: ಭತ್ತದ ಕೃಷಿ ಮತ್ತು ಅದರಿಂದ ಪರಿಸರ ಸಂರಕ್ಷಣೆ ಎಂಬ ಕಾರ್ಯಾಗಾರವನ್ನು ರೈತರಿಗಾಗಿ ಏರ್ಪಡಿಸಲು ಕೃಷಿ ಇಲಾಖೆ ಮುಂದಾಗಬೇಕು ಎಂದು ಶಾಸಕ ಬಿ.ಬಿ. ನಿಂಗಯ್ಯ ಹೇಳಿದ್ದಾರೆ.
ಅವರು ಮೇ 17ರಂದು ಮೂಡಿಗೆರೆಯಲ್ಲಿ ನಡೆಯುವ ಕೆಡಿಪಿ ಸಭೆಯ ಯಶಸ್ಸಿಗಾಗಿ ತಾಪಂ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಹಿಂದೆ ರೈತರು ಭತ್ತ ನಾಟಿ ಮಾಡಿ ಕೊಯ್ಲು ಮಾಡುವ ಮದ್ಯದಲ್ಲಿ ಸುಮಾರು ನಾಲ್ಕರಿಂದ ಐದು ತಿಂಗಳ ಕಾಲ ಪೈರು ಬಿಡುವ ಮಧ್ಯದಲ್ಲಿ ಸತತವಾಗಿ ಭತ್ತದ ಗದ್ದೆಗಳಿಗೆ ನೀರನ್ನು ಕಟ್ಟಿ ನಿಲ್ಲಿಸಲಾಗುತ್ತಿತ್ತು. ಇದರಿಂದಾಗಿ ಭೂಮಿ ಯಥೇಚ್ಚ ನೀರು ಕುಡಿದು ಅಂತರ್ಜಲ ಏರಿಕೆಗೆ ಕಾರಣವಾಗುತ್ತಿತ್ತು ಎಂದು ಹೇಳಿದರು.
ಸದ್ಯ ಭತ್ತದ ಕೃಷಿ ಕಡಿಮೆಯಾಗಿದ್ದು, ಅಂತರ್ಜಲ ಪಾತಾಳಕ್ಕೆ ಹೋಗಿದೆ. ಇದರಿಂದ ಹಳ್ಳಕೊಳ್ಳಗಳು ಸಂಪೂರ್ಣ ಬರಿದಾಗಿ ಬೆಳೆ ಸೇರಿದಂತೆ ಕುಡಿಯಲು ನೀರಿಲ್ಲದಂತಾದೆ. ಕೆಲವು ರೈತರ ಅರಿವಿಗೆ ಬಂದಿದೆ. ಅಂತರ್ಜಲ ಹೆಚ್ಚಿಸುವ ವಿಷಯದ ಕುರಿತು ಎಲ್ಲ ರೈತರಿಗೆ ತಿಳಿಸುವ ಕಾರ್ಯಾಗಾರ ನಡೆಸಬೇಕು ಎಂದು ಸೂಚಿಸಿದರು, ಕಳೆದ ಕೆಲವು ದಿನಗಳಿಂದ ಮಳೆ ಬೀಳುತ್ತಿದೆ. ರೈತರಿಗೆ ಸಮರ್ಪಕ ಬಿತ್ತನೆ ಬೀಜ ವಿತರಿಸಬೇಕು. ಮಳೆಗಾಲ ಪ್ರಾರಂಭವನ್ನು ಎದುರುಗೊಳ್ಳಲು ಎಲ್ಲ ತಯಾರಿಯನ್ನು ಮಾಡಿಕೊಂಡು ತಂದು ಸಭೆಯಲ್ಲಿ ಮಂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾ ಅಧಿಕಾರಿ ರುದ್ರಪ್ಪ, ತಹಶೀಲ್ದಾರ್ ಪದ್ಮನಾಭಶಾಸ್ತ್ರಿ, ವಿವಿಧ ಇಲಾಖೆ ಅಧಿಕಾರಿಗಳು ನೌಕರರು ಮತ್ತಿತರರು ಉಪಸ್ಥಿತರಿದ್ದರು.







