ಸ್ವಚ್ಛ ಭಾರತ ಅಭಿಯಾನಕ್ಕೆ ಪಿಂಚಣಿದಾರರ ಬಳಕೆ
ಹೊಸದಿಲ್ಲಿ,ಮೇ 16: ಇಂದಿನಿಂದ ಮೇ 31ರವರೆಗೆ ‘ಸ್ವಚ್ಛ ಭಾರತ ಪಕ್ಷ’ ವನ್ನು ಆಚರಿಸಲಾಗುತ್ತಿದ್ದು, ಅಕ್ಟೋಬರ್,2019ರೊಳಗೆ ಸಂಪೂರ್ಣ ನೈರ್ಮಲ್ಯದ ಗುರಿ ಸಾಧನೆಗಾಗಿ ಸ್ವಚ್ಛ ಭಾರತ ಅಭಿಯಾನದಲ್ಲಿ ಸುಮಾರು 58 ಲಕ್ಷ ಪಿಂಚಣಿದಾರರನ್ನು ತೊಡಗಿಸಿಕೊಳ್ಳಲು ಕೇಂದ್ರ ಸರಕಾರವು ಮುಂದಾಗಿದೆ.
ಸದಸ್ಯರಲ್ಲಿ ತಮ್ಮ ಪರಿಸರದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ‘ಸ್ವಚ್ಛ ಭಾರತ ಪಕ್ಷ’ದ ಭಾಗವಾಗುವಂತೆ ಸಿಬ್ಬಂದಿ,ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ದೇಶಾದ್ಯಂತವಿರುವ ಎಲ್ಲ ಕೇಂದ್ರ ಸರಕಾರಿ ಪಿಂಚಣಿದಾರರ ಸಂಘಗಳಿಗೆ ಪತ್ರಗಳನ್ನು ಬರೆದಿದೆ.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಸಕ್ತ ನಿವೃತ್ತ ನೌಕರರು ವಾರಕ್ಕೆ ಎರಡು ಗಂಟೆಗಳಂತೆ ವರ್ಷಕ್ಕೆ 100 ಗಂಟೆಗಳನ್ನು ಇದಕ್ಕಾಗಿ ಮೀಸಲಿಡಬೇಕಾಗುತ್ತದೆ.
ದೇಶದಲ್ಲಿ ಆರೋಗ್ಯ ಮತ್ತು ನೈರ್ಮಲ್ಯ ಸುಧಾರಣೆಯ ನಿಟ್ಟಿನಲ್ಲಿ ಇದೊಂದು ಪ್ರಮುಖ ಉಪಕ್ರಮವಾಗಿದೆ. ಇದು ಯಶಸ್ವಿಯಾಗಲು ನಾಗರಿಕರ ನಡವಳಿಕೆಗಳಲ್ಲಿ ಸುಸ್ಥಿರ ಬದಲಾವಣೆಗಳೊಂದಿಗೆ ಜನತೆಯ ಆಂದೋಲನವಾಗಬೇಕಿದೆ. ಹೀಗಾಗಿ ಅಭಿಯಾನದಲ್ಲಿ ಜನರು ಪಾಲ್ಗೊಳ್ಳುವಂತಾಗಲು ಮತ್ತು ಅದು ನಿಜಕ್ಕೂ ಜನತೆಯ ಚಳವಳಿಯಾಗುವಂತೆ ಮಾಡಲು ಎಲ್ಲ ಪ್ರಯತ್ನಗಳು ನಡೆಯಬೇಕಾಗಿವೆ ಎಂದು ಸಚಿವಾಲಯವು ತನ್ನ ಪತ್ರದಲ್ಲಿ ಹೇಳಿದೆ.
ತಮ್ಮ ಸಂಖ್ಯೆ,ದೇಶದ ಎಲ್ಲ ಭಾಗಗಳಲ್ಲಿಯೂ ಉಪಸ್ಥಿತಿ ಮತ್ತು ಸಮಾಜದಲ್ಲಿ ಗೌರವದ ಸ್ಥಾನಮಾನದೊಂದಿಗೆ ಕೇಂದ್ರ ಸರಕಾರದ ನಿವೃತ್ತ ನೌಕರರು ಸಮಾಜದ ಬಹು ಮುಖ್ಯ ಅಂಗವಾಗಿದ್ದಾರೆ. ಪರಿಸರದಲ್ಲಿ ಸ್ವಚ್ಛತೆ,ಕಾರ್ಯಾಗಾರಗಳ ಆಯೋಜನೆ ಇತ್ಯಾದಿಗಳ ಮೂಲಕ ಅವರು ಮಹತ್ವದ ಕೊಡುಗೆಯನ್ನು ಸಲ್ಲಿಸಬಲ್ಲರು ಎಂದು ಹೇಳಿರುವ ಸಚಿವಾಲಯವು, ಈ ಉದಾತ್ತ ಕಾರ್ಯದಲ್ಲಿ ಸರಕಾರದೊಡನೆ ಕೈಜೋಡಿಸುವಂತೆ ಮತ್ತು ರಾಷ್ಟ್ರ ಮತ್ತು ಸಮಾಜದ ಹಿತಕ್ಕಾಗಿ ತಮ್ಮ ಕೊಡುಗೆಯನ್ನು ಮುಂದುವರಿಸುವಂತೆ ಪಿಂಚಣಿದಾರರಿಗೆ ಕರೆ ನೀಡಿದೆ.





