ಹತ್ಯಾರೋಪಿ ರಾಕಿಯ ಸೋದರ ಸಂಬಂಧಿ ನ್ಯಾಯಾಲಯಕ್ಕೆ ಶರಣು
ಪಾಟ್ನಾ, ಮೇ 16: ತನ್ನ ಕಾರನ್ನು ಹಿಂದೆ ಹಾಕಿದುದಕ್ಕಾಗಿ ಬಿಹಾರದಲ್ಲಿ ಹದಿಹರೆಯದ ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದಿರುವ ರಾಕಿ ಯಾದವ್‌ನ ಸೋದರ ಸಂಬಂಧಿ ತೇನಿಯಾದವ್ ಎಂಬಾತ ಸೋಮವಾರ ಮುಂಜಾನೆ ಗಯಾದ ನ್ಯಾಯಾಲಯವೊಂದಕ್ಕೆ ಶರಣಾಗಿದ್ದಾನೆ. ಆದಿತ್ಯ ಸಚ್‌ದೇವ್ ಎಂಬ ಯುವಕನನ್ನು ರಾಕಿ ಗುಂಡಿಕ್ಕಿ ಕೊಂದ ಸಂದರ್ಭದಲ್ಲಿ ತೇನಿ ಸಹ ಜೊತೆಯಲ್ಲಿದ್ದನೆನ್ನಲಾಗಿದೆ. ಗಯಾದಲ್ಲಿ ರಾಕಿಯ ಬಂಧನವಾದ ಬಳಿಕ ಪೊಲೀಸರು ತೇನಿಗಾಗಿ ಹುಡುಕುತ್ತಿದ್ದರು. ಘಟನೆಯಲ್ಲಿ ತನ್ನ ಯಾವುದೇ ಪಾತ್ರವಿಲ್ಲವೆಂದು ಹೇಳಿಕೆಯೊಂದರಲ್ಲಿ ಆತ ಪ್ರತಿಪಾದಿಸಿದ್ದಾನೆ.
ಮೇ 7ರಂದು ಆದಿತ್ಯ ಸಚ್‌ದೇವ್(19) ತನ್ನ ಸ್ನೇಹಿತರೊಂದಿಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಾಕಿ ಯಾದವ್‌ನ ರೇಂಜರ್ ರೋವರ್ ಕಾರನ್ನು ಹಿಂದೆ ಹಾಕಿದ್ದರು.
24ರ ಹರೆಯದ ರಾಕಿ ಗಾಳಿಯಲ್ಲಿ ಎಚ್ಚರಿಕೆಯ ಗುಂಡು ಹಾರಿಸಿದಾಗ ಸಚ್‌ದೇವ್ ಕಾರು ನಿಲ್ಲಿಸಿದ್ದರೆಂದು ಆತನ ಮಿತ್ರರು ಹೇಳಿದ್ದಾರೆ. ಬಳಿಕ, ರಾಕಿ ಹಾಗೂ ಆತನ ಸ್ನೇಹಿತರು ಆದಿತ್ಯ ಮತ್ತವರ ಮಿತ್ರರಿಗೆ ಥಳಿಸಿದರು. ಅವರು ತಮ್ಮ ಕಾರಿನಲ್ಲಿ ಸ್ಥಳದಿಂದ ಪಾರಾಗಲು ಯತ್ನಿಸಿದಾಗ, ಯಾರೋ ಹಿಂದಿನಿಂದ ಗುಂಡು ಹಾರಿಸಿದ್ದರು. ಅದು ಸಚ್‌ದೇವ್‌ಗೆ ತಗಲಿ, ಅವರು ಸ್ಥಳದಲ್ಲೇ ಮೃತರಾಗಿದ್ದರು.







