ಅಣ್ಣಾ ಹಝಾರೆಗೆ ಮತ್ತೆ ಕೊಲೆ ಬೆದರಿಕೆ ಪತ್ರ

ಹೊಸದಿಲ್ಲಿ, ಮೇ 16: ಸಮಾಜದಲ್ಲಿ ‘ಅಶಾಂತಿ’ ಹರಡುತ್ತಿರುವುದಕ್ಕಾಗಿ ಗಾಂಧಿವಾದಿ ಹಾಗೂ ಸಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆಯವರನ್ನು ಕೊಲೆ ಮಾಡಲಾಗು ವುದೆಂಬ ಬೆದರಿಕೆ ಪತ್ರವೊಂದು ರವಿವಾರ ಅವರ ಕಚೇರಿಗೆ ಬಂದಿದೆಯೆಂದು ಹಝಾರೆಯವರ ಸಹಾಯಕರೊಬ್ಬರು ತಿಳಿಸಿದ್ದಾರೆ.
ಮರಾಠಿ ಭಾಷೆಯಲ್ಲಿ ಕೈಯಿಂದ ಬರೆದಿರುವ ಈ ಪತ್ರವು ರಾಲೇಗಣ ಸಿದ್ದಿಯಲ್ಲಿರುವ ಹಝಾರೆಯವರ ಕಚೇರಿಗೆ ರವಿವಾರ ಅಪರಾಹ್ನ ತಲುಪಿದೆಯೆಂದು ಅವರ ವಕ್ತಾರ ಶ್ಯಾಂ ಅಸವಾ ಹೇಳಿದ್ದಾರೆ.
‘‘ತುಮ್ಹಿ ಸಮಾಜಾತ್ ಅಸಂತೋಷ್ ಪಸ್ರಾವತ್ ಆಹತ್ ಮ್ಹಣೂನ ತುಮ್ಹಾಲಾ ಉಡ್ವಾವೆ ಲಾಗೇಲ(ನೀವು ಸಮಾಜದಲ್ಲಿ ಅಶಾಂತಿ ಹರಡುತ್ತಿರುವ ಕಾರಣ ನಿಮ್ಮನ್ನು ಕೊಲೆ ಮಾಡಲಾಗುವುದು)’’ ಎಂದು ಪತ್ರದಲ್ಲಿ ಬರೆಯಲಾಗಿದೆಯೆಂದು ಅವರು ತಿಳಿಸಿದ್ದಾರೆ.
ಪತ್ರ ಕಳುಹಿಸಿದಾತನ ಹೆಸರನ್ನು ಅಹ್ಮದ್‌ನಗರದಿಂದ 65 ಕಿ.ಮೀ. ದೂರದ ನೇವಸೆಯ ‘ಅಂಬಾದಾಸ್ ಲಶ್ಕರೆ’ ಎಂದು ಬರೆಯಲಾಗಿದೆ.
ಅಂತಹ ಪತ್ರವೊಂದು ಬಂದಿರುವ ಬಗ್ಗೆ ತಮಗೆ ಮಾಹಿತಿ ಬಂದಿದೆಯೆಂದು ಪಾರ್ನೇರ್ ಪೊಲೀಸರು ತಿಳಿಸಿದರಾದರೂ, ತನಿಖೆಯ ಕುರಿತು ವಿವರ ನೀಡಲು ನಿರಾಕರಿಸಿದ್ದಾರೆ.
ಹಝಾರೆಯವರಿಗೆ ಈ ಹಿಂದೆಯೂ ಅನೇಕ ಕೊಲೆ ಬೆದರಿಕೆ ಪತ್ರಗಳು ಬಂದಿದ್ದವು. ಜ.26ರಂದು ಕೊಲ್ಲುವುದಾಗಿ ಬೆದರಿಸಿ ಜನವರಿಯಲ್ಲಿ ಬಂದಿದ್ದ ಪತ್ರ ಅವುಗಳಲ್ಲಿ ಇತ್ತೀಚಿನದಾಗಿತ್ತು.
ಪತ್ರ ಕಳುಹಿಸಿದಾತನನ್ನು ಪೊಲೀಸರು ಇದುವರೆಗೆ ಪತ್ತೆ ಮಾಡಿಲ್ಲವೆಂದು ಅಸವಾ ತಿಳಿಸಿದ್ದಾರೆ.
ಅಣ್ಣಾ ಅಂತಹ ಬೆದರಿಕೆಗಳಿಗೆ ಬಲಿಯಾಗುವುದಿಲ್ಲವೆಂದು ಅವರ ಆಪ್ತ ಸಹಾಯಕ ಶ್ಯಾಂ ಪಥಡೆ ಹೇಳಿದ್ದಾರೆ.
ಹಝಾರೆಯವರಿಗೆ ‘ಝಡ್’ ವರ್ಗದ ಭದ್ರತೆ ಕಲ್ಪಿಸಲಾಗಿದೆ.





