ಮಗುವಿಗೆ ಚಿವುಟಿ ಜೋಗುಳ ಹಾಡಲು ಒಂದು ಹೊಸ ಖಾತೆ!

‘‘ಮಗುವಿಗೆ ಚಿವುಟಿ, ಬಳಿಕ ತಾನೇ ಜೋಗುಳ ಹಾಡಿದರೆ?’’ ದೇಶದಲ್ಲಿ ಕೋಮುಸೌಹಾರ್ದಕ್ಕಾಗಿ ‘ಶಾಂತಿಗಾಗಿ ಸಚಿವಾಲಯ’ ವೊಂದನ್ನು ಸ್ಥಾಪಿಸಲು ಹೊರಟಿರುವ ಸರಕಾರದ ಚಿಂತನೆ ಇದೇ ದಾರಿಯಲ್ಲಿದೆ. ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಹೊಸತೊಂದು ಖಾತೆಯನ್ನು ರೂಪಿಸಲು ಕೇಂದ್ರ ಸರಕಾರ ನಿರ್ಧರಿಸಿದೆಯಂತೆ. ಕೋಮುಸೌಹಾರ್ದವೇ ಈ ಖಾತೆಯ ಹೊಣೆಗಾರಿಕೆ. ಇದಕ್ಕೊಬ್ಬ ಸ್ವತಂತ್ರ ಸಚಿವ ಮತ್ತು ಅವನಿಗೆ ಒಂದಿಷ್ಟು ಐಎಎಸ್, ಐಪಿಎಸ್ ಅಧಿಕಾರಿಗಳು. ಎಲ್ಲಿ ಕೋಮುಗಲಭೆ ಸಂಭವಿಸಿದೆಯೋ ಅಲ್ಲಿ, ಗರಿಷ್ಠ ಮಟ್ಟದಲ್ಲಿ ಶಾಂತಿ ಸ್ಥಾಪಿಸಲು ಶ್ರಮಿಸುವುದು ಈ ಖಾತೆಯ ಸಚಿವನ ಕರ್ತವ್ಯವಂತೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ. ದೇಶದಲ್ಲಿ ಕೋಮುಸೌಹಾರ್ದ ನೆಲೆಗೊಳ್ಳಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಶದಲ್ಲಿ ಇಂದು ಸೌಹಾರ್ದ ಕಡಿಮೆಯಾಗುತ್ತಿರುವುದು, ಕೋಮುಗಲಭೆಗಳು ಸಂಭವಿಸುತ್ತಿರುವುದು ಸಂಪುಟದಲ್ಲಿ ಅದಕ್ಕಾಗಿ ಒಂದು ಖಾತೆಯ ಕೊರತೆಯಿಂದಲ್ಲ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ದೇಶದಲ್ಲಿ ಯಾವಾಗ ಕಾನೂನು ಸುವ್ಯವಸ್ಥೆ ಸುಸ್ಥಿತಿಯಲ್ಲಿರುತ್ತದೆಯೋ ಅಲ್ಲಿಯವರೆಗೆ ಎಲ್ಲಿಯೂ ಗಲಭೆಗಳು ಸಂಭವಿಸುವುದಿಲ್ಲ. ಕಾನೂನು ಸುವ್ಯವಸ್ಥೆ ದುರ್ಬಲಗೊಂಡಾಗ ಮಾತ್ರ, ದುಷ್ಕರ್ಮಿಗಳು ಚುರುಕಾಗುತ್ತಾರೆ. ಅವರಿಗೆ ಸಮಾಜದಲ್ಲಿ ಅಶಾಂತಿ ಮೂಡಿಸಲು ಧೈರ್ಯ ಬರುತ್ತದೆ. ದೇಶದಲ್ಲಿ ಯಾವಾಗೆಲ್ಲ ಭಾರೀ ಗಲಭೆಗಳು ಸಂಭವಿಸಿದೆಯೋ ಆವಾಗೆಲ್ಲ ಕಾನೂನು ಸುವ್ಯವಸ್ಥೆ ನಿಷ್ಕ್ರಿಯವಾಗಿತ್ತು. ಮಾತ್ರವಲ್ಲ, ಹಿಂಸೆಯಲ್ಲಿ ಕಾನೂನು ವ್ಯವಸ್ಥೆಯೇ ಕೈ ಜೋಡಿಸಿತ್ತು. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಅಲ್ಲಿನ ಗೃಹ ಇಲಾಖೆ ದುಷ್ಕರ್ಮಿಗಳಿಗೆ ಸಹಕಾರಿಯಾಗಿ ಕೆಲಸ ಮಾಡಿದ ಕುರಿತಂತೆ ವ್ಯಾಪಕ ಆರೋಪ ಕೇಳಿ ಬಂದಿತ್ತು. ಮುಂಬೈ ಗಲಭೆಯ ಸಂದರ್ಭದಲ್ಲೂ ದುಷ್ಕರ್ಮಿಗಳ ಜೊತೆಗೆ ಗೃಹ ಇಲಾಖೆ ಒಳಗಿಂದೊಳಗೆ ಕೈ ಜೋಡಿಸಿರುವುದು ಗುಟ್ಟಾಗಿಲ್ಲ. ದೇಶದಲ್ಲಿ ಸೌಹಾರ್ದತೆ ಸ್ಥಾಪನೆಯಾಗಬೇಕಾದರೆ, ಗೃಹ ಇಲಾಖೆಯನ್ನು ರಾಜಕಾರಣಿಗಳು ದುರ್ಬಳಕೆ ಮಾಡಿಕೊಳ್ಳುವುದು ನಿಲ್ಲಬೇಕು. ಈ ಹಿನ್ನೆಲೆಯಲ್ಲಿ, ಸೌಹಾರ್ದಕ್ಕಾಗಿ ಹೊಸದೊಂದು ಸಚಿವಾಲಯದ ಅಗತ್ಯವಿಲ್ಲ. ಬದಲಿಗೆ ಗೃಹ ಖಾತೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವುದು ಮತ್ತು ಕಾನೂನು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸುವುದೇ ಸೌಹಾರ್ದದೆಡೆಗೆ, ಶಾಂತಿಯೆಡೆಗೆ ದೇಶವನ್ನು ಮುಂದಕ್ಕೆ ಒಯ್ಯಲು ನಮಗಿರುವ ಏಕೈಕ ಮಾರ್ಗ. ಹೊಸ ಖಾತೆ ನಿರ್ಮಾಣದಿಂದ ಕೇಂದ್ರ ಸಂಪುಟದೊಳಗೆ ಸೌಹಾರ್ದ ನಿರ್ಮಾಣವಾಗಬಹುದೇ ಹೊರತು ದೇಶಕ್ಕೆ ಅದರಿಂದ ಯಾವ ಪ್ರಯೋಜನವೂ ಇಲ್ಲ.
ಇಷ್ಟಕ್ಕೂ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದ ನಡೆದ ಕೋಮು ಹಿಂಸಾಚಾರಗಳನ್ನು ಕೈಗೆತ್ತಿಕೊಳ್ಳೋಣ. ಎಲ್ಲ ಗಲಭೆಗಳಲ್ಲೂ ರಾಜಕಾರಣಿಗಳು ನೇರ ಪಾತ್ರವಹಿಸಿರುವ ಕುರಿತಂತೆ ದಾಖಲೆಗಳು ಬಹಿರಂಗವಾಗಿವೆ. ಮೀರತ್‌ನಲ್ಲಿ ನಡೆದ ಗಲಭೆಗಳ ಹಿಂದೆ ಸಂಘಪರಿವಾರದ ನೇರ ಪಾತ್ರವಿದೆ. ಇಲ್ಲಿ ಜನರ ನಡುವಿನ ಹೊಂದಾಣಿಕೆಯ ಕೊರತೆಯಿಂದ ಗಲಭೆ ನಡೆದಿಲ್ಲ. ಸಂಘಪರಿವಾರ ಮೊದಲು ವದಂತಿಗಳನ್ನು ಹಬ್ಬಿಸಿ, ಜನರನ್ನು ಕೆರಳಿಸಿ ಬಳಿಕ ಅವರಿಂದ ಕೃತ್ಯಗಳನ್ನು ನಡೆಸಿತು. ದಾದ್ರಿಯಲ್ಲಿ ನಡೆದ ಗಲಭೆಯಲ್ಲೂ ಬಿಜೆಪಿ ಮುಖಂಡನ ಪಾತ್ರವಿರುವುದನ್ನು ಈಗಾಗಲೇ ಮಾಧ್ಯಮಗಳು ಬಹಿರಂಗ ಪಡಿಸಿವೆ. ಈ ಹಿಂದೆ ನಡೆದ ಮುಂಬೈ ಗಲಭೆಯಲ್ಲಿ ಶಿವಸೇನೆಯ ಪಾತ್ರವಿರುವುದನ್ನು ಶ್ರೀ ಕೃಷ್ಣ ಆಯೋಗ ನೇರವಾಗಿ ಉಲ್ಲೇಖಿಸಿತ್ತು. ಆದರೆ ಈವರೆಗೆ ಕೋಮುಗಲಭೆಯ ರೂವಾರಿಗಳಿಗೆ ಯಾವುದೇ ಶಿಕ್ಷೆಯಾಗಿಲ್ಲ. ಕಾನೂನಿನ ಈ ದೌರ್ಬಲ್ಯ, ಶಾಂತಿ ಕೆೆಡಿಸುವವರಿಗೆ ಹೊಸ ಧೈರ್ಯವನ್ನು ನೀಡುತ್ತದೆ. ಅವರು ಮತ್ತೆ ಮತ್ತೆ ಅಂತಹ ಕೃತ್ಯಗಳಲ್ಲಿ ತೊಡಗುತ್ತಾರೆ. ಶಾಂತಿ, ಸೌಹಾರ್ದಕ್ಕಾಗಿ ಸ್ಥಾಪನೆಗೊಳಿಸುವ ಖಾತೆಯ ಸಚಿವರು ಬೀದಿಯಲ್ಲಿ ನಿಂತು ಶಾಂತಿಯ ಮಂತ್ರವನ್ನು ಪಠಿಸಬಹುದು. ಆದರೆ ಅವರಿಗೆ ದುಷ್ಕೃತ್ಯಗಳನ್ನು ಎಸಗುವ ದುಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರವಿದೆಯೇ? ದುಷ್ಟರ ವಿರುದ್ಧ ಕ್ರಮ ಕೈಗೊಳ್ಳಲೆಂದೇ ಇರುವ ಗೃಹ ಸಚಿವಾಲಯವೇ ಇದರಲ್ಲಿ ವಿಫಲವಾಗಿರುವಾಗ ಈ ಹೊಸ ಖಾತೆಯ ಅಗತ್ಯವಾದರೂ ಏನು?
ದೇಶದಲ್ಲಿ ನಡೆಯುವ ಹತ್ತು ಹಲವು ಗಲಭೆಗಳಲ್ಲಿ ಆರೆಸ್ಸೆಸ್ ಮತ್ತು ಅದರ ಸೋದರ ಸಂಘಟನೆಗಳ ಕೈವಾಡಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ. ಎಲ್ಲಿಯವರೆಗೆ ಕೇಂದ್ರ ಸರಕಾರ ಆರೆಸ್ಸೆಸ್ ಮತ್ತು ಸಂಘಪರಿವಾರದ ಹಿಡಿತದಲ್ಲಿರುತ್ತದೆಯೋ ಅಲ್ಲಿಯವರೆಗೆ ಈ ಸಂಘಟನೆಗಳ ಕೃತ್ಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇಂದು ಆರೆಸ್ಸೆಸ್ ಸರಕಾರವನ್ನು ನಿಯಂತ್ರಿಸುತ್ತಿದೆ. ಅದರ ಪರಿಣಾಮವಾಗಿಯೇ ಉಗ್ರವಾದದ ಆರೋಪದಲ್ಲಿ ಬಂಧಿತರಾಗಿರುವ ಕೇಸರಿ ಸಂಘಟನೆಗಳ ಶಂಕಿತರು ಎನ್‌ಐಎ ಮೂಲಕ ಸುಲಭದಲ್ಲಿ ಬಿಡುಗಡೆಯಾಗುತ್ತಿದ್ದಾರೆ. ಸ್ಫೋಟ ಪ್ರಕರಣಗಳಂತಹ ಗಂಭೀರ ದುಷ್ಕೃತ್ಯಗಳಲ್ಲಿ ಭಾಗಿಯಾದವರು, ಸರಕಾರದ ಕುಮ್ಮಕ್ಕಿನ ಮೇರೆಗೆ ಬಿಡುಗಡೆಯಾಗುತ್ತಿರುವ ದಿನಗಳಲ್ಲಿ, ನಾವು ಶಾಂತಿಯನ್ನು ಬಯಸುವುದಾದರೂ ಹೇಗೆ? ಒಂದೆಡೆ ಕೇಂದ್ರ ಸರಕಾರ ವಿಷ ಬೀಜಗಳನ್ನು ಬಿತ್ತುತ್ತಿವೆ. ಮಗದೊಂದೆಡೆ ಸಿಹಿ ಮಾವಿನ ಫಲದ ಕುರಿತಂತೆ ಮಾತನಾಡುತ್ತಿದೆ. ಇಂತಹ ದ್ವಂದ್ವ ನೀತಿಯನ್ನು ಹೊಂದಿರುವ ಸರಕಾರ ಸಮಾಜದಲ್ಲಿ ಶಾಂತಿಯನ್ನು ನಿರ್ಮಿಸುವುದಕ್ಕೆ ಸಾಧ್ಯವಿದೆಯೇ?
ಇಂದು ದೇಶದಲ್ಲಿ ಶಾಂತಿಯನ್ನು ರಾಜಕಾರಣಿಗಳು ಜನರಿಗೆ ಬೋಧಿಸುವ ಅಗತ್ಯವಿಲ್ಲ. ಇಂದು ಜನರೊಳಗೆ ವಿಷಬೀಜವನ್ನು ಬಿತ್ತಿದ, ಸಮಾಜದಲ್ಲಿ ಕೋಮುದಳ್ಳುರಿಯನ್ನು ಸೃಷ್ಟಿಸುತ್ತಿರುವುದು ರಾಜಕಾರಣಿಗಳು. ತಾವು ಅಧಿಕಾರ ಹಿಡಿಯಬೇಕಾದರೆ, ಹಿಂಸಾಚಾರ ಅತ್ಯಗತ್ಯ ಎಂದು ಬಲವಾಗಿ ನಂಬಿರುವ ರಾಜಕಾರಣಿಗಳು ಕೇಂದ್ರ ಸರಕಾರದ ಒಳಗೇ ಇದ್ದಾರೆ. ಅವರನ್ನು ಸರಿಪಡಿಸಿದರೆ ದೇಶದಲ್ಲಿ ಶೇ. 90ರಷ್ಟು ಶಾಂತಿ ನೆಲೆಯೂರುತ್ತದೆ. ಹಾಗೆಯೇ ಸ್ವಾಮೀಜಿಗಳು, ಧಾರ್ಮಿಕ ಮುಖಂಡರು ರಾಜಕೀಯ ನಡೆಸದೆ, ತಮ್ಮ ತಮ್ಮ ಆಧ್ಯಾತ್ಮಿಕ ಕೆಲಸದಲ್ಲಿ ತನ್ಮಯರಾದರೆ ಉಳಿದ ಶೇ. 10 ಶಾಂತಿ ಸಮಾಜದಲ್ಲಿ ನೆಲೆಯೂರುತ್ತದೆ. ಆದರೆ ಇಂದು ಧಾರ್ಮಿಕ ಮುಖಂಡರು ರಾಜಕೀಯದ ಜೊತೆಗೆ ಅನೈತಿಕ ಸಂಬಂಧವನ್ನು ಹೊಂದಿದ್ದಾರೆ. ಆದುದರಿಂದ ರಾಜಕಾರಣಿಗಳೂ ಮತ್ತು ಧಾರ್ಮಿಕ ಮುಖಂಡರು ಸಮಾಜವನ್ನು ಒಳಿತಿನೆಡೆಗೆ ಕೊಂಡೊಯ್ಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರಕಾರ ಕೇಂದ್ರದಲ್ಲಿ ಶಾಂತಿ, ಸೌಹಾರ್ದಕ್ಕಾಗಿ ಒಂದು ಖಾತೆಯನ್ನು ನಿರ್ಮಿಸುವುದೇ ತಮಾಷೆಯ ವಿಷಯವಾಗಿದೆ. ಬಹುಶಃ ಸರಕಾರದೊಳಗಿರುವ ಅತೃಪ್ತ ರಾಜಕಾರಣಿಗಳನ್ನು ತಣಿಸಲು ಈ ಖಾತೆ ಸಹಾಯ ಮಾಡಬಹುದು. ಸರಕಾರಕ್ಕೆ ಒಂದಿಷ್ಟು ಆರ್ಥಿಕ ಹೊರೆ ಹೆಚ್ಚಬಹುದು. ಇದರಾಚೆಗೆ ದೇಶದಲ್ಲಿ ಈ ಖಾತೆಯಿಂದ ಯಾವ ವ್ಯತ್ಯಾಸವೂ ಆಗಲಾರದು.





