ಜೂ.20ರಿಂದ ಎಸೆಸೆಲ್ಸಿ ಪೂರಕ ಪರೀಕ್ಷೆ

ಬೆಂಗಳೂರು, ಮೇ 16: ಎಸೆಸೆಲ್ಸಿ ಪೂರಕ ಪರೀಕ್ಷೆಗಳನ್ನು ಜೂ.20 ರಿಂದ 27ರವರೆಗೆ ರಾಜ್ಯಾದ್ಯಂತ ನಡೆಸಲಾಗುವುದು. ಎಲ್ಲ ಶಾಲೆಗಳಿಗೆ ಫಲಿತಾಂಶ ಪಟ್ಟಿಗಳ ಜೊತೆ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳ ಮಾಹಿತಿಯನ್ನು ಕಳುಹಿಸಲಾಗಿದೆ.
ಪೂರಕ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ಆಯಾ ಶಾಲೆಗಳಲ್ಲಿ ಮೇ 25ರೊಳಗೆ ನೋಂದಾಯಿಸಿಕೊಳ್ಳಬೇಕು. ಮುಖ್ಯಶಿಕ್ಷಕರು ಸ್ವೀಕರಿಸಿದ ಅರ್ಜಿಗಳನ್ನು ಶುಲ್ಕದೊಂದಿಗೆ ಮೇ 28ರೊಳಗೆ ಮಂಡಳಿಗೆ ಕಳುಹಿಸಿಕೊಡಬೇಕಿದೆ. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅನುತ್ತೀರ್ಣ ಅಭ್ಯರ್ಥಿಗಳು ಮರುಎಣಿಕೆ ಹಾಗೂ ಛಾಯಾ ಪ್ರತಿಗಾಗಿ ಅರ್ಜಿ ಸಲ್ಲಿಸಲು ಬಯಸಿದ್ದಲ್ಲಿ ಫಲಿತಾಂಶಕ್ಕಾಗಿ ಕಾಯದೆ ಪೂರಕ ಪರೀಕ್ಷೆಗಾಗಿ ನಿಗದಿತ ದಿನಾಂಕದೊಳಗೆ ಶುಲ್ಕ ಪಾವತಿಸಿ ನೋಂದಾಯಿಸಿಕೊಳ್ಳಬೇಕು. ಮಂಡಳಿಗೆ ಪಾವ ತಿಸಬೇಕಾದ ಶುಲ್ಕಗಳನ್ನು NEFT ಮೂಲಕ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಾವತಿಸಬೇಕು.
ಪರೀಕ್ಷಾ ಶುಲ್ಕದ ವಿವರಗಳು: ಒಂದು ವಿಷಯಕ್ಕೆ 240 ರೂ., ಎರಡು ವಿಷಯಕ್ಕೆ 290 ರೂ., ಮೂರು ಅಥವಾ ಅದಕ್ಕಿಂತ ಮೇಲ್ಪಟ್ಟ ವಿಷಯಗಳಿಗೆ 390 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ. ಎಲ್ಲ ವಿಷಯಗಳ ಮರುಎಣಿಕೆ ಹಾಗೂ ಛಾಯಾ ಪ್ರತಿಗಾಗಿ ನಿಗದಿತ ಅರ್ಜಿ ಸಲ್ಲಿಸಲು ಮೇ 26 ಕೊನೆ ದಿನವಾಗಿದೆ. ಅಭ್ಯರ್ಥಿಗಳು ಮರು ಎಣಿಕೆ ಅಥವಾ ಛಾಯಾ ಪ್ರತಿ ಇವೆರಡರಲ್ಲಿ ಯಾವುದಾದರೂ ಒಂದಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅಭ್ಯರ್ಥಿಗಳು ಅರ್ಜಿಗಳನ್ನು ರಾಜ್ಯದ ಎಲ್ಲ ಕರ್ನಾಟಕ-1 ಮತ್ತು ಬೆಂಗಳೂರು -1 ಕೇಂದ್ರಗಳ ಮೂಲಕ ಸಲ್ಲಿಸಬಹುದಾಗಿದೆ. ಸಂಬಂಧಪಟ್ಟ ವಿಷಯಗಳ ಛಾಯಾಪ್ರತಿ ಪಡೆದ ಅಭ್ಯರ್ಥಿಗಳು ಉತ್ತರ ಪತ್ರಿಕೆಗಳ ಮರು ವೌಲ್ಯಮಾಪನಕ್ಕಾಗಿ ನಿಗದಿತ ಶುಲ್ಕದೊಂದಿಗೆ 7 ದಿನಗಳೊಳಗೆ ಮಂಡಳಿಗೆ ಅರ್ಜಿ ಸಲ್ಲಿಸಬೇಕು.
ಶುಲ್ಕದ ವಿವರ: ಮರು ಎಣಿಕೆ ಒಂದು ವಿಷಯಕ್ಕೆ 150 ರೂ., ಛಾಯಾ ಪ್ರತಿ ಒಂದು ವಿಷಯಕ್ಕೆ 300 ರೂ. ಹಾಗೂ ಮರು ವೌಲ್ಯಮಾಪನ ಒಂದು ವಿಷಯಕ್ಕೆ 700 ರೂ.ಶುಲ್ಕವನ್ನು ನಿಗದಿಪಡಿಸಲಾಗಿದೆ.







