ಡೆಲ್ಲಿಗೆ ಪುಣೆ ವಿರುದ್ಧ ನಿರ್ಣಾಯಕ ಪಂದ್ಯ
ವಿಶಾಖಪಟ್ಟಣ, ಮೇ 16: ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯವಾಗಿ ಸೋತಿರುವ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಮಂಗಳವಾರ ಇಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ತಂಡವನ್ನು ಮಣಿಸಿ ಪ್ಲೇ-ಆಫ್ ಅವಕಾಶವನ್ನು ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿದೆ.
ಝಹೀರ್‌ಖಾನ್ ನೇತೃತ್ವದ ಡೆಲ್ಲಿ ತಂಡ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿದೆ. ಅದು 11 ಪಂದ್ಯಗಳ ಪೈಕಿ 6ರಲ್ಲಿ ಜಯ ಸಾಧಿಸಿ 12 ಅಂಕವನ್ನು ಗಳಿಸಿದ್ದು, ಅಂಕಪಟ್ಟಿಯಲ್ಲಿ ಐದನೆ ಸ್ಥಾನದಲ್ಲಿದೆ. ಡೆಲ್ಲಿಗೆ ನಾಕೌಟ್ ಹಂತವನ್ನು ತಲುಪಬೇಕಾದರೆ ಉಳಿದ ಮೂರೂ ಪಂದ್ಯಗಳನ್ನು ಗೆಲ್ಲಬೇಕಾದ ಸವಾಲು ಎದುರಾಗಿದೆ.
ಮತ್ತೊಂದೆಡೆ, ಪುಣೆ ತಂಡ ಈಗಾಗಲೆ ಟೂರ್ನಿಯ ಪ್ಲೇ-ಆಫ್ ಸ್ಪರ್ಧೆಯಿಂದ ಹೊರ ನಡೆದಿದೆ. ಎಂಎಸ್ ಧೋನಿ ಬಳಗ ಕೇವಲ ಪ್ರತಿಷ್ಠೆಗಾಗಿ ಪಂದ್ಯವನ್ನು ಆಡಬೇಕಾಗಿದೆ.
ರವಿವಾರ ಇಲ್ಲಿನ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡ ಮುಂಬೈ ದಾಂಡಿಗ ಕ್ರುನಾಲ್ ಪಾಂಡ್ಯ ಅವರ ಬಿರುಸಿನ ಬ್ಯಾಟಿಂಗ್‌ಗೆ(37 ಎಸೆತ, 86 ರನ್)ತತ್ತರಿಸಿ ಹೀನಾಯವಾಗಿ ಸೋತಿತ್ತು.
ಡೆಲ್ಲಿಯ ಪರ ಈ ತನಕ ಕ್ರಮವಾಗಿ 13 ಹಾಗೂ 11 ವಿಕೆಟ್‌ಗಳನ್ನು ಉರುಳಿಸಿರುವ ಸ್ಪಿನ್-ವೇಗದ ಜೋಡಿ ಅಮಿತ್ ಮಿಶ್ರಾ ಹಾಗೂ ಕ್ರಿಸ್ ಮೋರಿಸ್ ಪುಣೆ ವಿರುದ್ಧವೂ ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದುಕೊಡುವ ವಿಶ್ವಾಸ ಮೂಡಿಸಿದ್ದಾರೆ.
ಡೆಲ್ಲಿ ತಂಡದ ನಾಯಕ ಝಹೀರ್‌ಖಾನ್ ಟೂರ್ನಿಯಲ್ಲಿ ಒಟ್ಟು 9 ವಿಕೆಟ್‌ಗಳನ್ನು ಉರುಳಿಸಿದ್ದಲ್ಲದೆ ಇಕಾನಮಿ ರೇಟ್‌ನ್ನು ಚೆನ್ನಾಗಿ ಕಾಯ್ದುಕೊಂಡಿದ್ದಾರೆ. ಡೆತ್ ಓವರ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಬಲ್ಲ ಝಹೀರ್ ಮಂಗಳವಾರದ ನಿರ್ಣಾಯಕ ಪಂದ್ಯದಲ್ಲಿ ತಂಡಕ್ಕೆ ನೆರವಾಗುವ ಸಾಧ್ಯತೆಯಿದೆ.
ಡೆಲ್ಲಿಯ ಬ್ಯಾಟಿಂಗ್ ಸರದಿಯಲ್ಲಿ ಕ್ವಿಂಟನ್ ಡಿಕಾಕ್, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್, ಕರುಣ್ ನಾಯರ್ ಅವರಂತಹ ಆಟಗಾರರಿದ್ದಾರೆ. ಪುಣೆ ತಂಡ ಅಜಿಂಕ್ಯ ರಹಾನೆ ಅವರನ್ನೆ ಹೆಚ್ಚು ನೆಚ್ಚಿಕೊಂಡಿದೆ. ನಾಯಕ ಧೋನಿ ಇನಿಂಗ್ಸ್‌ಗೆ ಅಂತಿಮ ಸ್ಪರ್ಶ ನೀಡಲು ಯತ್ನಿಸಿದರೂ ಅವರಿಗೆ ಮತ್ತೊಂದು ಕಡೆಯಿಂದ ಉತ್ತಮ ಬೆಂಬಲ ಸಿಗುತ್ತಿಲ್ಲ. ಸೌರಬ್ ತಿವಾರಿ ಹಾಗೂ ಆಲ್‌ರೌಂಡರ್ ತಿಸಾರ ಪೆರೇರ ನಿರೀಕ್ಷಿತ ಪ್ರದರ್ಶನ ನೀಡದೆ ನಿರಾಸೆಗೊಳಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಆರ್.ಅಶ್ವಿನ್ ಹಾಗೂ ಎಂ.ಅಶ್ವಿನ್ ಸ್ಥಿರ ಪ್ರದರ್ಶನ ನೀಡಲು ವಿಫಲವಾಗುತ್ತಿದ್ದಾರೆ. ಇದ್ದುದರಲ್ಲಿ ಆಸ್ಟ್ರೇಲಿಯದ ಸ್ಪಿನ್ನರ್ ಆಡಮ್ ಝಾಂಪ ಹೈದರಾಬಾದ್‌ನ ವಿರುದ್ಧ 6 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು.
ಪಂದ್ಯದ ಸಮಯ: ರಾತ್ರಿ 8:00







