ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ ಸುಶೀಲ್ ಕುಮಾರ್

ಹೊಸದಿಲ್ಲಿ, ಮೇ 16: ಮುಂಬರುವ ರಿಯೋ ಒಲಿಂಪಿಕ್ ಗೇಮ್ಸ್‌ನಲ್ಲಿ 74 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತವನ್ನು ಯಾರು ಪ್ರತಿನಿಧಿಸಬೇಕೆಂದು ನಿರ್ಧರಿಸಲು ಟ್ರಯಲ್ಸ್ ನಡೆಸಲು ಆದೇಶ ನೀಡುವಂತೆ ಕುಸ್ತಿಪಟು ಸುಶೀಲ್ ಕುಮಾರ್ ದಿಲ್ಲಿ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಭುಜನೋವಿನಿಂದ ಚೇತರಿಸಿಕೊಳ್ಳುತ್ತಿರುವ ಸುಶೀಲ್ ಆಗಸ್ಟ್‌ನಲ್ಲಿ ನಡೆಯಲಿರುವ ರಿಯೋ ಗೇಮ್ಸ್‌ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಆಡುವುದರಿಂದ ವಂಚಿತರಾಗಿದ್ದರು. ಈ ಹಿನ್ನೆಲೆಯಲ್ಲಿ ಇನ್ನೋರ್ವ ಕುಸ್ತಿಪಟು ನರಸಿಂಗ್ ಯಾದವ್ 74 ಕೆಜಿ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಸ್ಥಾನಪಡೆದಿದ್ದರು.
2008ರ ಬೀಜಿಂಗ್ ಒಲಿಂಪಿಕ್ಸ್ ಹಾಗೂ 2012ರ ಲಂಡನ್ ಗೇಮ್‌ನಲ್ಲಿ ಕ್ರಮವಾಗಿ ಕಂಚು ಹಾಗೂ ಬೆಳ್ಳಿ ಪದಕ ಜಯಿಸಿರುವ ಸುಶೀಲ್, ಈ ಹಿಂದಿನ ಪ್ರದರ್ಶನದ ಆಧಾರದಲ್ಲಿ ಈ ವರ್ಷದ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸುವ ಹಕ್ಕು ಹೊಂದಿರುವುದಾಗಿ ವಾದಿಸುತ್ತಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಇಬ್ಬರಲ್ಲಿ ಯಾರು ಪ್ರತಿನಿಧಿಸಬೇಕೆಂದು ನಿರ್ಧರಿಸಲು ಟ್ರಯಲ್ ನಡೆಸುವಂತೆ ಸುಶೀಲ್ ಭಾರತದ ಕುಸ್ತಿ ಫೆಡರೇಶನ್(ಡಬ್ಲುಎಫ್‌ಐ) ಹಲವು ಬಾರಿ ವಿನಂತಿಸಿದ್ದರು. ಆದರೆ, ಟ್ರಯಲ್ಸ್ ಮೂಲಕ ಸ್ಪರ್ಧಿಗಳನ್ನು ಆಯ್ಕೆಮಾಡುವ ಬೇಡಿಕೆಗೆ ತನ್ನ ಸಹಮತವಿಲ್ಲ ಎಂದು ಫೆಡರೇಶನ್ ಸುಶೀಲ್‌ಗೆ ಈಗಾಗಲೇ ಸ್ಪಷ್ಟಪಡಿಸಿದೆ.
ನಮ್ಮಿಬ್ಬರಲ್ಲಿ(ಸುಶೀಲ್ ಹಾಗೂ ನರಸಿಂಗ್)ಯಾರು ಉತ್ತಮ ಹಾಗೂ ಬಲಿಷ್ಠರಿದ್ದಾರೆ ಅವರನ್ನು ರಿಯೋಗೆ ಕಳುಹಿಸಬೇಕು. ನಾನು ಟ್ರಯಲ್ಸ್‌ಗೆ ಸಿದ್ಧ. ಕಳೆದ ಎರಡು ವರ್ಷಗಳಿಂದ ನಮ್ಮ ಸರಕಾರ ಹಾಗೂ ಫೆಡರೇಶನ್ ನನಗೆ ಸಾಕಷ್ಟು ಹಣ ವ್ಯಯಿಸಿದೆ. ಆದ್ದರಿಂದ ದೇಶಕ್ಕಾಗಿ ಕೊಡುಗೆ ನೀಡಬೇಕೆಂಬ ಬಯಕೆ ನನ್ನದು ಎಂದು ಸುಶೀಲ್ ತಿಳಿಸಿದ್ದಾರೆ.







