ಭಾರತದ ಮಹಿಳಾ ತಂಡ ಶುಭಾರಂಭ
ಉಬೇರ್ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್
ಕುನ್ಶಾನ್, ಮೇ 16: ಆಸ್ಟ್ರೇಲಿಯವನ್ನು 5-0 ಅಂತರದಿಂದ ಮಣಿಸಿರುವ ಭಾರತದ ಮಹಿಳಾ ತಂಡ ಉಬೇರ್ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಶುಭಾರಂಭ ಮಾಡಿದೆ.
ಹೊಸದಿಲ್ಲಿಯಲ್ಲಿ ನಡೆದ ಕಳೆದ ಆವೃತ್ತಿ ಉಬೇರ್‌ಕಪ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಭಾರತೀಯ ಮಹಿಳೆಯರು ಐತಿಹಾಸಿಕ ಸಾಧನೆ ಮಾಡಿದ್ದರು. ಸೋಮವಾರ ಇಲ್ಲಿನ ಕುನ್ಶಾನ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಮಹಿಳೆಯರು ಎಲ್ಲ ಮೂರು ಸಿಂಗಲ್ಸ್ ಪಂದ್ಯಗಳನ್ನು ಹಾಗೂ ಎರಡು ಡಬಲ್ಸ್ ಪಂದ್ಯಗಳನ್ನು ಜಯಿಸುವುದರೊಂದಿಗೆ ಗರಿಷ್ಠ ಅಂಕವನ್ನು ಬಾಚಿಕೊಂಡರು.
ವಿಶ್ವದ ನಂ.8ನೆ ಆಟಗಾರ್ತಿ ಸೈನಾ ನೆಹ್ವಾಲ್ ವಿಶ್ವದ ನಂ.74ನೆ ಆಟಗಾರ್ತಿ ಸುಯಾನ್-ಯೂ ವೆಂಡಿ ಚೆನ್ ವಿರುದ್ಧ 22-20, 21-14 ಗೇಮ್‌ಗಳ ಅಂತರದಿಂದ ಜಯ ಸಾಧಿಸಿ 1-0 ಮುನ್ನಡೆ ಪಡೆದರು. ಜಾಯ್ ಲೈ ವಿರುದ್ಧ 25 ನಿಮಿಷಗಳಲ್ಲಿ ಜಯ ಸಾಧಿಸಿರುವ ಪಿ.ವಿ.ಸಿಂಧು ಭಾರತಕ್ಕೆ 2-0 ಮುನ್ನಡೆ ಒದಗಿಸಿಕೊಟ್ಟರು.
ಡಬಲ್ಸ್ ಜೋಡಿ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ 28 ನಿಮಿಷಗಳ ಡಬಲ್ಸ್ ಪಂದ್ಯದಲ್ಲಿ ಸುಯಾನ್-ಯೂ ವೆಂಡಿ ಹಾಗೂ ಗ್ರಾನಿ ಸಮರ್‌ವಿಲ್ಲೆ ಅವರನ್ನು 21-9, 21-15 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.
ದಕ್ಷಿಣ ಏಷ್ಯಾ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ರುಥ್ವಿಕ್ ಶಿವಾನಿ ದಿನದ ಮೂರನೆ ಸಿಂಗಲ್ಸ್ ಪಂದ್ಯದಲ್ಲಿ ಟಿಫಾನಿ ಹೊ ಅವರನ್ನು 21-5, 21-11 ಗೇಮ್‌ಗಳ ಅಂತರದಿಂದ ಮಣಿಸಿದರು.
ಸಿಕ್ಕಿರೆಡ್ಡಿ ಹಾಗೂ ಸಿಂಧು ಜೋಡಿ ಲಿಯಾನ್ನೆ ಚೂ ಹಾಗೂ ಜಾಯ್ ಲೈ ಅವರನ್ನು 21-12, 21-12 ಗೇಮ್‌ಗಳ ಅಂತರದಿಂದ ಸೋಲಿಸುವ ಮೂಲಕ ಭಾರತಕ್ಕೆ 5-0 ಅಂತರದ ಗೆಲುವು ತಂದುಕೊಟ್ಟರು.
ಭಾರತ ಮಂಗಳವಾರ ನಡೆಯಲಿರುವ ಡಿ ಗುಂಪಿನ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ







