99.2% ಪಡೆದ ತಫೀಮ್ ಇಮ್ತಿಯಾಝ್ ಗೆ ಸರ್ಜನ್ ಆಗುವ ಗುರಿ
ಸಂಸ್ಕೃತದಲ್ಲಿ 100ಕ್ಕೆ 100!
ಶಿರಸಿ, ಮೇ 17: ಇಲ್ಲಿನ ವಿದ್ಯಾರ್ಥಿನಿ ತಫೀಮ್ ಇಂತಿಯಾಝ್ ಎಸೆಸೆಲ್ಸಿ ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.
ಶಿರಸಿಯ ಮಾರಿಕಾಂಬ ಸರಕಾರಿ ಅಂಗ್ಲ ಪ್ರೌಢಶಾಲೆಯ ವಿದ್ಯಾರ್ಥಿನಿ ತಫೀಮ್ ಇಮ್ತಿಯಾಝ್ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದು ಸಂಸ್ಕೃತ ಭಾಷೆಯಲ್ಲಿ ಹಿಡಿತ ಸಾಧಿಸಿ, ಪರೀಕ್ಷೆಯಲ್ಲಿ 100 ರಲ್ಲಿ 100 ಅಂಕಗಳನ್ನು ಪಡೆದಿರುತ್ತಾಳೆ. ಉಳಿದಂತೆ ಕನ್ನಡ -122, ವಿಜ್ಞಾನ-99, ಸಮಾಜ ವಿಜ್ಞಾನ-100, ಗಣಿತ - 100 ಹಾಗೂ ಇಂಗ್ಲಿಷ್ ನಲ್ಲಿ 99 ಅಂಕಗಳನ್ನು ಪಡೆದು 625 ರಲ್ಲಿ 620 ಪಡೆದು (99.2 ಶೇ.) ಜಿಲ್ಲೆಗೆ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ. ಇವರು ಶಿರಸಿಯ ಇಂಮ್ತಿಯಾಝ್ ಶೇಖ್ ಮತ್ತು ಗುಲ್ಶಾದ್ ಶೇಖ್ ದಂಪತಿ ಪುತ್ರಿ.
ಈ ಕುರಿತು ವಾರ್ತಾಭಾರತಿಯೊಂದಿಗೆ ಮಾತನಾಡಿದ ತಫೀಮ್ ಇಮ್ತಿಯಾಝ್ ನನಗೆ 620 ಅಂಕ ಬರಬಹುದೆಂದು ಊಹಿಸಲಿಲ್ಲ. ನನಗೆ ಮತ್ತು ನನ್ನ ಕುಟುಂಬದವರಿಗೆ ತುಂಬಾ ಖುಷಿಯಾಗಿದೆ.ಮುಂದೆ ಪಿ.ಯು.ಸಿ.ಯಲ್ಲಿ ಪಿ.ಸಿ.ಎಮ್.ಬಿ. ವಿಷಯಗಳನ್ನು ಓದಿ ಸರ್ಜನ್ ಆಗಬೇಕೆಂಬ ಆಸೆ ಇದೆ ಎಂದು ಹೇಳುತ್ತಾರೆ.ತಂದೆ ಇಮ್ತಿಯಾಝ್ ಅವರು ಬಟ್ಟೆ ವ್ಯಾಪಾರಿಯಾಗಿದ್ದು, ನನಗೆ ತುಂಬಾ ಸಹಕರಿಸುತ್ತಾರೆ. ತಾಯಿ ಮತ್ತು ಸಹೋದರರು ನನ್ನ ಓದಿಗೆ ಸಹಕರಿಸುತ್ತಾರೆ. ನನ್ನ ಗುರುಗಳಿಗೆ ತುಂಬಾ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಶಾಲೆಯ ಮುಖ್ಯಾಧ್ಯಾಪಕ ನಾಗರಾಜ ನಾಯಕರನ್ನು ವಾರ್ತಾಭಾರತಿ ಸಂಪರ್ಕಿಸಿದಾಗ ಅವರು ತಫೀಮ್ ಇಮ್ತಿಯಾಝ್, ಮನೆಯಲ್ಲಿ ಉರ್ದು ಪರಿಸರ, ಶಾಲೆಯಲ್ಲಿ ಕನ್ನಡ ಪರಿಸರ ಇವೆರಡರ ಮಧ್ಯೆ ಸಂಸ್ಕೃತ. ಕನ್ನಡವೇ ಸರಿಯಾಗಿ ಅರ್ಥವಾಗದ ನಮಗೆ ಇನ್ನೂ ಸಂಸ್ಕೃತ ಭಾಷೆಯನ್ನು ಕಲಿಯುವುದು ಬಿಡಿ ಅದರ ಹತ್ತಿರ ಸುಳಿಯದ ಅದೆಷ್ಟೋ ಹಿಂದೂ ವಿದ್ಯಾರ್ಥಿಗಳು ಇದ್ದಾರೆ. ಆದರೆ ಮುಸ್ಲಿಮ್ ವಿದ್ಯಾರ್ಥಿನಿಯೋರ್ವಳು ಈ ಸಾಧನೆಗೈದಿರುವುದು ಆಕೆಯ ಪ್ರತಿಭೆಯನ್ನು ತೋರಿಸುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಎಂಟನೆ ತರಗತಿಯಿಂದಲೇ ಸಂಸ್ಕೃತವನ್ನು ಐಚ್ಚಿಕ ವಿಷಯವನ್ನಾಗಿ ತೆಗೆದುಕೊಂಡು ಅಧ್ಯಯನ ಆರಂಭಿಸಿದ ಈಕೆ ಕೇವಲ ಹಿಂದಿ ಮತ್ತು ಉರ್ದು ಭಾಷೆಯ ತಿಳಿವಳಿಕೆ ಇದ್ದ ನನಗೆ ಸಂಸ್ಕೃತ ಭಾಷೆಯನ್ನು ಕಲಿಯುವ ಹೆಬ್ಬಯಕೆಯಿಂದಾಗಿಯೆ ಸಂಸ್ಕೃತವನ್ನು ಒಂದು ಭಾಷೆಯನ್ನಾಗಿ ಆಯ್ದುಕೊಂಡಿದ್ದು ಭಾಷೆಯನ್ನು ಗುರುತಿಸುವ ಮತ್ತು ಅದನ್ನು ಅನುಭವಿಸುವ ಮನೋಭಾವನೆಯೇ ಇಂದು ನನಗೆ ಸಂಸ್ಕೃತ ವಿಷಯದಲ್ಲಿ 100 ಅಂಕಗಳನ್ನು ತಂದುಕೊಟ್ಟಿದೆ ಎಂದು ವಿದ್ಯಾರ್ಥಿನಿ ತಫ್ಹೀಮ್ ಮಾಧ್ಯಮಗಳಲ್ಲಿ ತಮ್ಮ ಸಂಸ್ಕೃತದ ಅನುಭವವನ್ನು ಹಂಚಿಕೊಂಡಿದ್ದಾರೆ. ಸರಕಾರಿ ಶಾಲೆಯೊಂದರಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತ ಇವರು ಯಾವುದೇ ಖಾಸಗಿ ಮನೆಪಾಠ ಇಲ್ಲದೆ ಶೇ.99.2 ಅಂಕಗಳಿಸಿರುವುದು ದೊಡ್ಡ ಸಾಧನೆಯೇ ಸರಿ. ರಾಜ್ಯದಲ್ಲೇ ಸಂಸ್ಕ್ರತ ಪಠ್ಯ ವಿಷಯದಲ್ಲಿ 100 ಅಂಕ ಗಳಿಸಿದ ಏಕೈಕ ಮುಸ್ಲಿಂ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.