ನರ್ಸರಿ ವ್ಯವಸ್ಥಾಪಕಿಯಿಂದ ಕಾರ್ಮಿಕನಿಗೆ ಹಲ್ಲೆ, ಜೀವಬೆದರಿಕೆ ಆರೋಪ: ದೂರು
ಕಡಬ, ಮೇ 17. ಕೊಲದಲ್ಲಿರುವ ನರ್ಸರಿ ವ್ಯವಸ್ಥಾಪಕಿಯೋರ್ವರು ಸಂಬಳ ಕೇಳಿದ್ದಕ್ಕೆ ಹಲ್ಲೆ ನಡೆಸಿ, ಚುಚ್ಚು ಮದ್ದು ಚುಚ್ಚಿ ಬಳಿಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ನರ್ಸರಿ ಕಾರ್ಮಿಕ, ಜೀಪು ಚಾಲಕ ಕಡಬ ಪೊಲೀಸರಿಗೆ ದೂರು ನೀಡಿದ್ದಾರೆ.
ಬಳ್ಳಾರಿ ಮೂಲದ,ನರ್ಸರಿಯಲ್ಲಿ ಕಾರ್ಮಿಕನಾಗಿ ಮತ್ತು ಜೀಪು ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಬಸವರಾಜು ದೂರು ನೀಡಿದ ವ್ಯಕ್ತಿ.
ಕಳೆದ ಕೆಲ ಸಮಯದಿಂದ ಕೊಲ ಪಶು ಸಂಗೋಪನಾ ಕ್ಷೇತ್ರದೊಳಗೆ ಕಾರ್ಯಾಚರಿಸುತ್ತಿರುವ ಖಾಸಗಿ ನರ್ಸರಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಆದರೆ ಸಂಸ್ಥೆಯ ವ್ಯವಸ್ಥಾಪಕಿ ಸರಿಯಾಗಿ ಸಂಬಳ ನೀಡದೆ ಸತಾಯಿಸುತ್ತಿದ್ದರು. ಮೇ. 15ರಂದು ಸಂಜೆ ಸಂಬಳ ಕೊಡುವಂತೆ ಕೇಳಿದ್ದು, ನನ್ನನ್ನು ರೂಂನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿರುತ್ತಾರೆ. ಮರುದಿನ ಬೆಳಗ್ಗೆ ನಾನು ಊರಿಗೆ ಹೋಗುತ್ತೇನೆ ಸಂಬಳ ಕೊಡಿ ಎಂದಾಗ ಮತ್ತೆ ಹಲ್ಲೆ ನಡೆಸಿ, ನನ್ನ ಮೈಮೇಲೆ ಚುಚ್ಚುಮದ್ದು ಚುಚ್ಚಿ, ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಬಳಿಕ ಅಸ್ವಸ್ಥನಾಗಿ ಪ್ರಜ್ಞಾಹೀನ ಸ್ಥಿತಿಗೆ ಬಿದ್ದಿದ್ದು, ಸ್ವಲ್ಪ ಹೊತ್ತಿನ ಬಳಿಕ ನಾನು ಸುಧಾರಿಸಿಕೊಂಡು ಅಲ್ಲಿಂದ ಎದ್ದು ಹೊರ ಬರುತ್ತಿದ್ದಂತೆ ತಡೆ ಒಡ್ಡಿದ್ದು, ಜೀವ ರಕ್ಷಣೆ ಸಲುವಾಗಿ ತಪ್ಪಿಸಿಕೊಂಡು ಬಂದಿರುವುದಾಗಿ ಹಲ್ಲೆಗೆ ಒಳಗಾದ ಬಸವರಾಜು ಕಡಬ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ದೂರಿನನ್ವಯ ಕಡಬ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.





