ಪುತ್ತೂರು: ಲಾರಿ ತಡೆದು ನಗದು ದರೋಡೆ

ಪುತ್ತೂರು, ಮೇ 17: ಆಲ್ಟೋ ಕಾರಿನಲ್ಲಿ ಬಂದ ತಂಡವೊಂದು ಲಾರಿಯೊಂದನ್ನು ತಡೆದು ಚಾಲಕನಿಗೆ ಹಲ್ಲೆ ನಡೆಸಿ 40 ಸಾವಿರ ರೂ. ದೋಚಿ ಪರಾರಿಯಾದ ಘಟನೆ ಸೋಮವಾರ ರಾತ್ರಿ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಒಳಮೊಗ್ರು ಗ್ರಾಮದ ಕುಂಬ್ರ ಎಂಬಲ್ಲಿ ನಡೆದಿದೆ.
ಮೈಸೂರಿನಿಂದ ಪುತ್ತೂರು ಕಡೆಗೆ ಆಗಮಿಸುತ್ತಿದ್ದ ಲಾರಿಯನ್ನು ಆಲ್ಟೋ ಕಾರಿನಲ್ಲಿ ಬಂದ ತಂಡವೊಂದು ಕುಂಬ್ರ ಪೆಟ್ರೋಲ್ ಬಂಕ್ ಬಳಿಯಲ್ಲಿ ತಡೆದು ನಿಲ್ಲಿಸಿ ಚಾಲಕ ಬಂಡೀಪುರದ ಪ್ರಸನ್ನ ಎಂಬಾತನಿಗೆ ಹಲ್ಲೆ ನಡೆಸಿದ್ದರು.
ಹಲ್ಲೆಯನ್ನು ತಡೆಯಲು ಪ್ರಸನ್ನ ಪ್ರಯತ್ನಿಸುತ್ತಿದ್ದ ವೇಳೆಯಲ್ಲಿ ನಿಯಂತ್ರಣ ತಪ್ಪಿದ ಲಾರಿಯು ಹಿಂದಕ್ಕೆ ಚಲಿಸಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಜೆಸಿಬಿಯೊಂದಕ್ಕೆ ಢಿಕ್ಕಿ ಹೊಡೆದಿತ್ತು. ಈ ವೇಳೆಗೆ ಲಾರಿಯೊಳಗೆ ಬಂದ ಮೂವರು ಚಾಲಕ ಪ್ರಸನ್ನ ಅವರಲ್ಲಿದ್ದ 40 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಲಾರಿ ಢಿಕ್ಕಿಯಾದ ಸಂದರ್ಭದಲ್ಲಿ ಜೆಸಿಬಿ ಹಿಂದಕ್ಕೆ ಚಲಿಸಿ ಪಕ್ಕದಲ್ಲಿದ್ದ ಮಸೀದಿಯ ಆವರಣ ಗೋಡೆಗೆ ಢಿಕ್ಕಿಯಾಗಿ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.





