ಎಸೆಸೆಲ್ಸಿ: ದ.ಕ ಜಿಲ್ಲೆಯ 95 ಶಾಲೆಗಳಿಗೆ ಶೇ.100 ಫಲಿತಾಂಶ

ಮಂಗಳೂರು, ಮೇ 17: ದ.ಕ. ಜಿಲ್ಲೆಯಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ಒಟ್ಟು 495 ಶಾಲೆಗಳ ಪೈಕಿ 95 ಶಾಲೆಗಳಲ್ಲಿ ಶೇ.100 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು 31,013 ವಿದ್ಯಾರ್ಥಿಗಳಲ್ಲಿ 27,328 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು (ಶೇ. 89.91), ಈ ಪೈಕಿ 2,916 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 5,513 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯ 495 ಪ್ರೌಢ ಶಾಲೆಗಳ ಪೈಕಿ 120 ಸರಕಾರಿ ಶಾಲೆಗಳಲ್ಲಿ 89 ಅನುದಾನಿತ ಶಾಲೆಗಳಲ್ಲಿ ಹಾಗೂ 185 ಅನುದಾನ ರಹಿತ ಶಾಲೆಗಳಲ್ಲಿ ಶೇ.80ಕ್ಕಿಂತ ಅಧಿಕ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಜಿಲ್ಲೆಯಲ್ಲಿ 15,435 ಹುಡುಗರು ಪರೀಕ್ಷೆಗೆ ಹಾಜರಾಗಿದ್ದು 12,974 (ಶೇ. 84.06)ಉತ್ತೀರ್ಣರಾಗಿದ್ದಾರೆ. ಹಾಜರಾದ 15,578 ಹುಡುಗಿಯರ ಪೈಕಿ 14,354 (ಶೇ. 92.14)ಉತ್ತೀರ್ಣರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಶೇ. 88.12 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಸರಕಾರಿ ಪ್ರೌಢ ಶಾಲೆಗಳಲ್ಲಿ ಶೇ. 82.27,ಅನುದಾನಿತ ಶಾಲೆಗಳಲ್ಲಿ ಶೇ. 88.46, ಅನುದಾನ ರಹಿತ ಶಾಲೆಗಳಲ್ಲಿ ಶೇ. 93.69 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ತೇರ್ಗಡೆ ಹೊಂದಿರುವವರ ಪೈಕಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳು ಮುಂದಿದ್ದಾರೆ. ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಶೇ. 86.98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ನಗರ ಪ್ರದೇಶದಲ್ಲಿ ಶೇ. 89.91 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಬಾರಿ ಪ್ರಥಮ ಭಾಷಾ ವಿಷಯದಲ್ಲಿ ಶೇ. 97.33, ದ್ವಿತೀಯ ಭಾಷಾ ವಿಷಯದಲ್ಲಿ ಶೇ. 95.12, ತೃತಿಯ ಭಾಷಾ ವಿಷಯದಲ್ಲಿ ಶೇ. 94.95, ವಿಜ್ಞಾನ ವಿಷಯದಲ್ಲಿ ಶೇ. 92.79, ಗಣಿತ ವಿಷಯದಲ್ಲಿ ಶೇ. 92.09, ಸಮಾಜ ವಿಜ್ಞಾನ ವಿಷಯದಲ್ಲಿ ಶೇ. 93.64 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.







