ಎಸೆಸೆಲಿ್ಸ ಫಲಿತಾಂಶ: ಕೊಡಗು ಜಿಲ್ಲೆಗೆ ಶೇ. 78.93

ಮಡಿಕೇರಿ, ಮೇ 17: ಹತ್ತನೆ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆಯ 7,241 ವಿದ್ಯಾರ್ಥಿಗಳಲ್ಲಿ 5,715 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.78.93 ಫಲಿತಾಂಶ ಬಂದಿದೆ. ಕಳೆದ ಸಾಲಿನ ಫಲಿತಾಂಶ ಶೇ.86.90ಗೆ ಹೋಲಿಸಿದಲ್ಲಿ ಈ ಬಾರಿ ಶೇ.8ರಷ್ಟು ಫಲಿತಾಂಶ ಕುಂಠಿತಗೊಂಡಿದೆ. ಆದರೆ ರಾಜ್ಯ ಮಟ್ಟದಲ್ಲಿ ಕಳೆದ ಸಾಲಿನ 18ನೆ ಸ್ಥಾನವನ್ನೇ ಜಿಲ್ಲೆ ಉಳಿಸಿಕೊಂಡಿದೆ.
ಪರೀಕ್ಷೆಗೆ ಹಾಜರಾದ 3,526 ಬಾಲಕರಲ್ಲಿ 2,642 ಮಂದಿ ತೇರ್ಗಡೆಯಾಗಿ ಶೇ.74.93 ಫಲಿತಾಂಶ ಬಂದಿದ್ದು, 3,715 ಬಾಲಕಿಯರಲ್ಲಿ 3,073 ಮಂದಿ ಉತ್ತೀರ್ಣರಾಗಿ ಶೇ.82.72 ಫಲಿತಾಂಶ ಪಡೆಯುವ ಮೂಲಕ ಎಂದಿನಂತೆ ಪರೀಕ್ಷೆಯಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ.
ನಿಹಾರಿಕಾ ಕೊಡಗಿಗೆ ಪ್ರಥಮ: 10ನೆ ತರಗತಿ ಪರೀಕ್ಷೆಯಲ್ಲಿ ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢ ಶಾಲೆಯ ನಿಹಾರಿಕಾ 621 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ದ್ವಿತೀಯ ಸ್ಥಾನದಲ್ಲಿರುವ ಮಡಿಕೇರಿಯ ಸಂತ ಜೋಸೆಫರ ಶಾಲೆಯ ಕೆ.ಎಂ ನೇಹಾ ಹಾಗೂ ವೀರಾಜಪೇಟೆಯ ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ರಿಷಿರ ತಲಾ 619 ಅಂಕ ಪಡೆದಿದ್ದಾರೆ. ಕುಶಾಲನಗರ ಫಾತಿಮಾ ಕಾನ್ವೆಂಟ್‌ನ ಪ್ರೌಢಶಾಲೆಯ ದೀಪಿಕಾ ಮೂರ್ತಿ ಹಾಗೂ ವೀರಾಜಪೇಟೆಯ ಕಳತ್ಮಾಡು ಲಯನ್ಸ್ ಪ್ರೌಢಶಾಲೆಯ ಕರುಣ್ ನಾಚಯ್ಯ ತಲಾ 617 ಅಂಕ ಪಡೆದು ತೃತೀಯ ಸ್ಥಾನದಲ್ಲಿದ್ದಾರೆ.
ಕೊಡಗಿಗೆ 18 ನೆ ಸ್ಥಾನ:
ಕೊಡಗು ಜಿಲ್ಲೆ ಕಳೆದ ವರ್ಷದಂತೆ ಈ ವರ್ಷವೂ 18ನೆ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದು, ಪರೀಕ್ಷೆ ಬರೆದಿದ್ದ ಒಟ್ಟು 7,241 ವಿದ್ಯಾರ್ಥಿಗಳಲ್ಲಿ 5,715 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ. 78.93 ಫಲಿತಾಂಶ ಲಭಿಸಿದೆ. ಜಿಲ್ಲೆಯಲ್ಲಿ 3,715 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, 3,073 ಮಂದಿ ತೇರ್ಗಡೆ ಹೊಂದಿದ್ದಾರೆ. ಬಾಲಕರಲ್ಲಿ 3,526 ಮಂದಿ ಪರೀಕ್ಷೆ ಎದುರಿಸಿದ್ದು, 2,642 ಮಂದಿ ಉತ್ತೀರ್ಣರಾಗಿದ್ದಾರೆ. ಕೊಡಗಿನಲ್ಲಿ 19 ಶಾಲೆಗಳಿಗೆ ಶೇ. 100 ರಷ್ಟು ಫಲಿತಾಂಶ ಬಂದಿದೆ. ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖಾ ಉಪನಿರ್ದೇಶಕ ಜಿ.ಆರ್. ಬಸವರಾಜು ಅವರು ಫಲಿತಾಂಶದ ಕುರಿತು ಸುದ್ದಿಗಾರರಿಗೆ ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದರು.
ವೀರಾಜಪೇಟೆ ತಾಲೂಕು ಪ್ರಥಮ:
ಪರೀಕ್ಷಾ ಫಲಿತಾಂಶದಲ್ಲಿ ವೀರಾಜಪೇಟೆ ತಾಲೂಕು ಶೇ.79.81 ಫಲಿತಾಂಶದೊಂದಿಗೆ ಜಿಲ್ಲೆಗೆ ಪ್ರಥಮವಾಗಿದೆ. ತಾಲೂಕಿನ 2,452 ವಿದ್ಯಾರ್ಥಿಗಳಲ್ಲಿ 1,957 ಮಂದಿ ಉತ್ತೀರ್ಣರಾಗಿದ್ದಾರೆ. ಮಡಿಕೇರಿ ತಾಲೂಕಿನ 2,127 ವಿದ್ಯಾರ್ಥಿಗಳಲ್ಲಿ 1,696 ಮಂದಿ ತೇರ್ಗಡೆಯಾಗಿ ಶೇ.79.74 ಫಲಿತಾಂಶದೊಂದಿಗೆ ದ್ವಿತೀಯ ಸ್ಥಾನ ಪಡೆದಿದೆ. ಸೋಮವಾರಪೇಟೆ ತಾಲೂಕಿನ 2,934 ವಿದ್ಯಾರ್ಥಿಗಳಲ್ಲಿ 2,294 ಮಂದಿ ಉತ್ತೀರ್ಣರಾಗಿ ಶೇ.78.19 ಫಲಿತಾಂಶದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದೆ.
20 ಶಾಲೆಗಳಿಗೆ ಶೇ.100 ಫಲಿತಾಂಶ:
ಕೊಡಗು ಜಿಲ್ಲಾ ವ್ಯಾಪ್ತಿಯ 177 ಶಾಲೆಗಳಲ್ಲಿ 20 ಶಾಲೆಗಳು ಶೇ.100 ಫಲಿತಾಂಶದ ಸಾಧನೆ ಮಾಡಿವೆ. ವೀರಾಜಪೇಟೆ ತಾಲೂಕಿನ ಪಾಲಿಬೆಟ್ಟದ ಲೂರ್ಡ್ಸ್, ಪೊನ್ನಂಪೇಟೆಯ ಸಂತ ಅಂಥೋಣಿ, ಕಳತ್ಮಾಡು ಲಯನ್ಸ್ ಪ್ರೌಢಶಾಲೆ, ವೀರಾಜಪೇಟೆಯ ಕಾವೇರಿ ಶಾಲೆ, ಗೋಣಿಕೊಪ್ಪಲು ಸಂತ ಥೋಮಸ್, ಅರ್ವತ್ತೊಕ್ಲುವಿನ ಸರ್ವದೈವತಾ, ಪೊನ್ನಂಪೇಟೆಯ ಸಾಯಿ ಶಂಕರ್, ವೀರಾಜಪೇಟೆಯ ತ್ರಿವೇಣಿ ಶಾಲೆ, ಟಿ. ಶೆಟ್ಟಿಗೇರಿಯ ರೂಟ್ಸ್ ಪ್ರೌಢ ಶಾಲೆಗಳು ಶೇ.100 ರಷ್ಟು ಸಾಧನೆ ಮಾಡಿವೆ.
ಸೋಮವಾರಪೇಟೆ ತಾಲೂಕಿನ ಕಿರಗಂದೂರು ಸರಕಾರಿ ಪ್ರೌಢ ಶಾಲೆ, ಕೊಡಗರಹಳ್ಳಿ ಶಾಂತಿನಿಕೇತನ, ನೆಲ್ಯಹುದಿಕೇರಿಯ ಆಂಗ್ಲೋ ವರ್ನಾಕ್ಯುಲರ್, ಹಟ್ಟಿಹೊಳೆಯ ನಿರ್ಮಲಾ ವಿದ್ಯಾಭವನ್, ಕುಶಾಲನಗರದ ಫಾತಿಮಾ ಕಾನ್ವೆಂಟ್ ಶೇ.100 ಫಲಿತಾಂಶ ಪಡೆದುಕೊಂಡಿವೆ.
ಮಡಿಕೇರಿ ತಾಲೂಕಿನ ಗಾಳಿಬೀಡು ಸರಕಾರಿ ಪ್ರೌಢಶಾಲೆ, ಮೂರ್ನಾಡು ಮಾರುತಿ ಪ್ರೌಢ ಶಾಲೆ, ಮೂರ್ನಾಡು ಜ್ಞಾನ ಜ್ಯೋತಿ, ಕೊಟ್ಟೂರು ರಾಜರಾಜೇಶ್ವರಿ ಪ್ರೌಢ ಶಾಲೆ, ಸಿದ್ದಾಪುರ ಶ್ರೀಕೃಷ್ಣ ವಿದ್ಯಾಮಂದಿರ ಮತ್ತು ಸಿದ್ದಾಪುರದ ಇಕ್ರಾ ಪಬ್ಲಿಕ್ ಶಾಲೆ ಪ್ರತಿಶತ ಫಲಿತಾಂಶ ಪಡೆದ ವಿದ್ಯಾಸಂಸ್ಥೆಗಳಾಗಿವೆ.
ಕಡಿಮೆ ಫಲಿತಾಂಶ: ಸೋಮವಾರಪೇಟೆ ತಾಲೂಕಿನ ಸರಕಾರಿ ಪದವಿ ಪೂರ್ವ ಕಾಲೇಜು ಜಿಲ್ಲೆಯಲ್ಲೆ ಕನಿಷ್ಠ ಶೇ.23.40 ಫಲಿತಾಂಶ ಪಡೆದುಕೊಂಡಿದೆ.







