ಮಾರುಕಟ್ಟೆ ಸುಧಾರಣೆಯಿಂದ ರೈತರ ಬದುಕು ಬದಲಾಗುತ್ತದೆ: ಶಾಸಕ ಬಿ.ಬಿ.ನಿಂಗಯ್ಯ

ಚಿಕ್ಕಮಗಳೂರು, ಮೇ 17: ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಸುಧಾರಣೆಯಾದರೆ ನಾಡಿನ ರೈತರ ಬದುಕು ಬದಲಾಗುತ್ತದೆ ಎಂದು ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ ಹೇಳಿದ್ದಾರೆ.
ಅವರು ಆಲ್ದೂರಿನ ಸಂತೆ ಮೈದಾನದಲ್ಲಿ 25 ಲಕ್ಷ ರೂ. ವೆಚ್ಚದ ಹರಾಜು ಕಟ್ಟೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿರುವ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆಗಳು ಇಂದು ಭ್ರಷ್ಟಾಚಾರದ ಕೂಪಗಳಾಗಿವೆ. ಅವುಗಳನ್ನು ಮಾರುಕಟ್ಟೆ ಸಮಿತಿಯ ನಿಯಂತ್ರಣದಲ್ಲಿರದೆ ದಳ್ಳಾಳಿಗಳು ಮತ್ತು ಅಧಿಕಾರಿಗಳಿಂದ ನಡೆಯುತ್ತಿವೆ, ಇದರಿಂದಾಗಿ ಕೃಷಿಕರಿಗೆ ನಿರಂತರವಾಗಿ ಶೋಷಣೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಸಾಲ ಮಾಡಿ ಬೆವರು ಸುರಿಸಿ ಬೆಳೆದ ಬೆಳೆಗೆ ನ್ಯಾಯವಾದ ಬೆಲೆ ಸಿಗದೇ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಅನ್ನದಾತರು ಎಪಿಎಂಸಿಗಳ ದಳ್ಳಾಳಿಗರ ಮತ್ತು ವ್ಯಾಪಾರಗಾರರ ಬಳಿ ಭಿಕ್ಷೆ ಬೇಡುವ ಪರಿಸ್ಥಿತಿ ಇದೆ ಎಂದು ವಿಷಾದಿಸಿದರು.
ದಲ್ಲಾಳಿಗಾರರ ಮಾರುಕಟ್ಟೆಯಾಗಿರುವ ಎಪಿಎಂಸಿಗಳು ರೈತರ ಮಾರುಕಟ್ಟೆಗಳಾಗಬೇಕು. ಎಪಿಎಂಸಿಯಲ್ಲಿನ ಭ್ರಷ್ಟಾಚಾರ, ಕೃಷಿಕರ ಮೇಲಿನ ಶೋಷಣೆ ನಿಲ್ಲಬೇಕು ಮತ್ತು ರೈತರ ಪರವಾಗಿ ರೈತರಿಗಾಗಿ ಕೆಲಸ ಮಾಡುವಂತಾಗಬೇಕು ಆಗ ಅನ್ನದಾತರ ಬದುಕು ಹಸನಾಗುತ್ತದೆ ಎಂದರು.
ಎಪಿಎಂಸಿ ಅಧ್ಯಕ್ಷ ಚಂದ್ರೇಗೌಡ ಮಾತನಾಡಿ, ಕೃಷಿ ಉತ್ಪನ್ನ ಮಾರುಕಟ್ಟೆ ವತಿಯಿಂದ ಇದೇ ಮೊದಲ ಬಾರಿಗೆ ಗ್ರಾಮೀಣ ಭಾಗದಲ್ಲಿ ಹರಾಜು ಕಟ್ಟೆ ನಿರ್ಮಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲ ಸಂತೆಗಳಲ್ಲೂ ನಿಮಾರ್ಣ ಮಾಡಲಾಗುವುದು ಎಂದರು.
ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಪೂರ್ಣಿಮ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಉಪಾಧ್ಯಕ್ಷ ಈರಪ್ಪಗೌಡ, ಜಿಪಂ ಸದಸ್ಯ ನಿಖಿಲ್ ಚಕ್ರವರ್ತಿ, ತಾಪಂ ಸದಸ್ಯೆ ಭವ್ಯಾನಟೇಶ್, ಜೆಡಿಎಸ್ ಹೋಬಳಿ ಅಧ್ಯಕ್ಷ ಡಿ.ಎಂ.ಪ್ರವೀಣ್, ಗ್ರಾಪಂ ಸದಸ್ಯರಾದ ಎ.ಡಿ.ಕುಮಾರಸ್ವಾಮಿ, ಈರೇಗೌಡ ಮತ್ತಿತರರು ಉಪಸ್ಥಿತರಿದ್ದರು.







