ಆಸ್ಪತ್ರೆಗೆ ಬೀಗ ಜಡಿದ ಅಧಿಕಾರಿಗಳು
ಅಸಮರ್ಪಕ ತ್ಯಾಜ್ಯ ನಿರ್ವಹಣೆ

ಕಾರವಾರ, ಮೇ 17: ಶುಚಿತ್ವ, ಅಸಮರ್ಪಕ ತ್ಯಾಜ್ಯ ನಿರ್ವಹಣೆ ಹಾಗೂ ಅನಧಿಕೃತ ಲ್ಯಾಬೋರೇಟರಿ ನಡೆಸುತ್ತಿರುವ ಕಾರಣ ಕಾಜುಭಾಗದಲ್ಲಿನ ಡಾ.ಡಿ.ವಿ.ಸಾವಂತ್ ಎಂಬುವವರಿಗೆ ಸೇರಿದ ಆರ್ಯ ನರ್ಸಿಂಗ್ ಹೋಂ ಮೇಲೆ ದಾಳಿ ನಡೆಸಿದ ವಿವಿಧ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಬೀಗ ಜಡಿದಿದ್ದಾರೆ.
ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜಿಲ್ಲಾ ಟಾಸ್ಕ್‌ಫೋರ್ಸ್ ಕಮಿಟಿ ಅಧಿಕಾರಿಗಳು ನರ್ಸಿಂಗ್ ಹೋಂಗೆ ತೆರಳಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಬಿದ್ದ ಸಿರಿಂಜ್, ಪ್ಲಾಸ್ಟಿಕ್, ಬ್ಯಾಂಡೆಜ್, ಬಾಟಲ್ ಇನ್ನಿತರ ವಸ್ತುಗಳು ಗಮನಿಸಿದ ಅಧಿಕಾರಿಗಳು ಆಕ್ರೋಶಗೊಂಡ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ನರ್ಸಿಂಗ್ ಹೋಂನಲ್ಲಿ ತ್ಯಾಜ್ಯ ವಸ್ತುಗಳನ್ನು ಸಾರ್ವಜನಿಕ ಪ್ರದೇಶಗಳಲ್ಲಿ ಎಸೆಯುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ತಿಳಿಸಿದರೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ದಾಳಿ ನಡೆಸಿದ ಅಧಿಕಾರಿಗಳು ಆಸ್ಪತ್ರೆ ಸಿಬ್ಬಂದಿಗಳನ್ನು ಹೊರಗೆ ಕಳುಹಿಸಿ ಬೀಗ ಹಾಕಿದರು. ಆಸ್ಪತ್ರೆಯ ಅಶುಚಿತ್ವ ಬಗ್ಗೆ ರೋಗಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ನೋಟಿಸ್ ನೀಡಲಾಗಿತು. ಅಲ್ಲದೆ ಅನಧಿಕೃತ ಲ್ಯಾಬೋರೇಟರಿ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಸೀಜ್ ಮಾಡಲಾಗಿದೆ. ಇಂತಹ ಹಲವು ನರ್ಸಿಂಗ್ ಹೋಂ, ಆಸ್ಪತ್ರೆಗಳಿದ್ದು, ಅವುಗಳ ಮೇಲೆ ದಾಳಿ ನಡೆಸಲಾಗುವುದು ಎಂದು ಸಹಾಯಕ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಕುಮಾರಸ್ವಾಮಿ ಎಚ್ಚರಿಸಿದರು. ಪರಿಸರ ಇಂಜಿನಿಯರ್ ಮಲ್ಲಿಕಾರ್ಜುನ್, ಪಿಎಸ್ಸೈ ಕುಸುಮಾಧರ್, ಶ್ರೀಧರ ಮತ್ತಿತರರು ಉಪಸ್ಥಿತರಿದ್ದರು.





