ಓಂಪಠಣಕ್ಕೆ ರಾಜಕಾರಣಿಗಳ ವಿರೋಧ
ಯೋಗ ದಿನದ ಶಿಷ್ಟಾಚಾರ ಕುರಿತು ಚರ್ಚೆ
ಹೊಸದಿಲ್ಲಿ, ಮೇ 17: ಜೂನ್ 21ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನಕ್ಕೆ ಸಂಬಂಧಿಸಿದಂತೆ ಇನ್ನೊಂದು ವಿವಾದವು ಹುಟ್ಟಿಕೊಂಡಿದೆ. ವೈದಿಕ ಮಂತ್ರಗಳನ್ನು ಪಠಿಸುವಂತೆ ಯೋಗದಲ್ಲಿ ಭಾಗಿಯಾಗುವವರಿಗೆ ಸೂಚಿಸುವ ಮೂಲಕ ಬಿಜೆಪಿ ಸರಕಾರವು ತನ್ನ ‘ಹಿಂದುತ್ವ’ ಅಜೆಂಡಾಕ್ಕೆ ಒತ್ತು ನೀಡುತ್ತಿದೆ ಎಂದು ರಾಜಕಾರಣಿಗಳು ಪಕ್ಷಭೇದ ಮರೆತು ಆರೋಪಿಸಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆಯಲಿರುವ 45 ನಿಮಿಷಗಳ ಯೋಗಾಭ್ಯಾಸಕ್ಕೆ ಮುನ್ನ ‘ಓಂ’ ಮತ್ತು ಕೆಲವು ಮಂತ್ರಗಳನ್ನು ಹೇಳುವ ಕೇಂದ್ರದ ಪ್ರಸ್ತಾವನೆಗೆ ಕೆ.ಸಿ.ತ್ಯಾಗಿ(ಜೆಡಿಯು), ಸಂದೀಪ್ ದೀಕ್ಷಿತ್(ಕಾಂಗ್ರೆಸ್)ರಂತಹ ರಾಜಕಾರಣಿಗಳು ಮತ್ತು ಇತರ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ. ಆಯುಷ್ ಸಚಿವಾಲಯವು ಒಪ್ಪಿಗೆ ನೀಡಿರುವ ಸಾಮಾನ್ಯ ಯೋಗ ಶಿಷ್ಟಾಚಾರದಲ್ಲಿ ಯೋಗಾಭ್ಯಾಸವು ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ. ಸರಕಾರವು ನೇಮಿಸಿದ್ದ ತಜ್ಞರ ಸಮಿತಿಯು ಸಿದ್ಧಪಡಿಸಿರುವ ಈ ಶಿಷ್ಟಾಚಾರವನ್ನು ಸರಕಾರಿ ಇಲಾಖೆಗಳು,ಶಾಲಾಕಾಲೇಜುಗಳು ಮತ್ತು ವಿವಿಗಳ ಮೂಲಕ ರಾಷ್ಟ್ರಾದ್ಯಂತ ವಿತರಿಸಲಾಗಿದೆ.
ಜೂ.21ರಂದು ತಮ್ಮ ಕ್ಯಾಂಪಸ್‌ಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಈ ಶಿಷ್ಟಾಚಾರ ಪಾಲನೆಯಾಗುವಂತೆ ನೋಡಿಕೊಳ್ಳುವಂತೆ ಯುಜಿಸಿಯು ಉನ್ನತ ಶಿಕ್ಷಣಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಿದೆ.
ಯೋಗಾಭ್ಯಾಸದ ಸಂದರ್ಭ ಪಠಿಸಬೇಕಾಗಿರುವ ಮಂತ್ರವನ್ನು ಋಗ್ವೇದದಿಂದ ಆಯ್ದುಕೊಳ್ಳಲಾಗಿದೆ. ಎರಡು ನಿಮಿಷಗಳ ಪ್ರಾರ್ಥನೆಯೊಂದಿಗೆ ಆರಂಭಗೊಳ್ಳಲಿರುವ ಕಾರ್ಯಕ್ರಮವು 12 ನಿಮಿಷಗಳ ಧ್ಯಾನದೊಂದಿಗೆ ಮುಗಿಯಲಿದೆ.
ಆದರೆ ಟೀಕೆಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಸರಕಾರವು ‘ಓಂ’ ಹೇಳುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ.
ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮಗಳು ದಿಲ್ಲಿಯ ಬದಲು ಚಂಡಿಗಡದಲ್ಲಿ ನಡೆಯಲಿವೆ.







