ಭಾರತದ ಝಿಂಬಾಬ್ವೆ ಪ್ರವಾಸ: ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ?

ಹೊಸದಿಲ್ಲಿ, ಮೇ 17: ಭಾರತ ತಂಡದ ಝಿಂಬಾಬ್ವೆ ಪ್ರವಾಸದಿಂದ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮ ಹಾಗೂ ಶಿಖರ್ ಧವನ್ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.
ಜೂ.11 ರಿಂದ ಆರಂಭವಾಗಲಿರುವ ಝಿಂಬಾಬ್ವೆ ವಿರುದ್ಧದ ಮೂರು ಏಕದಿನ ಹಾಗೂ ಎರಡು ಟ್ವೆಂಟಿ-20 ಅಂತಾರಾಷ್ಟ್ರೀಯ ಸರಣಿಯಲ್ಲಿ ಎಂ.ಎಸ್. ಧೋನಿ ಭಾಗವಹಿಸುವುದು ಇನ್ನೂ ದೃಢಪಟ್ಟಿಲ್ಲ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಸ್ವದೇಶಿ ಸರಣಿ ಆರಂಭವಾದ ಬಳಿಕ ಕೊಹ್ಲಿ ಒಂದೂ ಪಂದ್ಯವನ್ನು ತಪ್ಪಿಸಿಕೊಂಡಿಲ್ಲ. ಪ್ರಸ್ತುತ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಕೊಹ್ಲಿ 4 ಟೆಸ್ಟ್, 10 ಏಕದಿನ ಹಾಗೂ 15 ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಕೊಹ್ಲಿ ಮುಂಬರುವ ನಾಲ್ಕು ವಿದೇಶಿ ಟೆಸ್ಟ್ ಸರಣಿಯಲ್ಲಿ ಭಾರತವನ್ನು 17 ಪಂದ್ಯಗಳಲ್ಲಿ ನಾಯಕನಾಗಿ ಮುನ್ನಡೆಸಲಿದ್ದಾರೆ. ಆದ್ದರಿಂದ ಭಾರತದ ಸ್ಟಾರ್ ದಾಂಡಿಗ ಕೊಹ್ಲಿಗೆ ವಿಶ್ರಾಂತಿಯ ಅಗತ್ಯವಿದೆ. ಮುಂಬೈ ದಾಂಡಿಗ ರೋಹಿತ್ ಶರ್ಮ ಕಳೆದ ಆರು ತಿಂಗಳಿಂದ ಕ್ರಿಕೆಟ್ ಆಡುತ್ತಿದ್ದಾರೆ.
ಇದೇ ವೇಳೆ, ಏಕದಿನ ತಂಡದ ನಾಯಕ ಧೋನಿ ಕೂಡ ಬಿಡುವಿಲ್ಲದ ಕ್ರಿಕೆಟ್ ಆಡುತ್ತಿದ್ದು, ಝಿಂಬಾಬ್ವೆಯಲ್ಲಿ ತಂಡವನ್ನು ಮುನ್ನಡೆಸುವ ಕುರಿತು ಸ್ಪಷ್ಟತೆಯಿಲ್ಲ. ಒಂದು ವೇಳೆ ಧೋನಿ ಝಿಂಬಾಬ್ವೆ ಪ್ರವಾಸದಿಂದ ಹೊರ ನಡೆದರೆ, 2016ರ ಋತುವಿನಲ್ಲಿ ಯಾವುದೇ ಪಂದ್ಯವನ್ನು ಆಡಲು ಸಾಧ್ಯತೆಯಿಲ್ಲ.
ಧೋನಿ ಝಿಂಬಾಬ್ವೆಗೆ ಪ್ರವಾಸಕೈಗೊಳ್ಳದೇ ಇದ್ದರೆ ಕಳೆದ ವರ್ಷದಂತೆ ಅಜಿಂಕ್ಯ ರಹಾನೆ ದ್ವಿತೀಯ ದರ್ಜೆ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ವಿಕೆಟ್‌ಕೀಪಿಂಗ್ ಜವಾಬ್ದಾರಿ ಕೆ.ಎಲ್. ರಾಹುಲ್ ಪಾಲಾಗಲಿದೆ. ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ರಾಹುಲ್ ಪ್ರದರ್ಶನವನ್ನು ಕಡೆಗಣಿಸುವಂತಿಲ್ಲ.
ಗಾಯದಿಂದ ಚೇತರಿಸಿಕೊಂಡು ಐಪಿಎಲ್‌ನಲ್ಲಿ ಆಡುತ್ತಿರುವ ಮುಹಮ್ಮದ್ ಶಮಿ ಹಾಗೂ ಮೋಹಿತ್ ಶರ್ಮ ಝಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗುವ ಸಾಧ್ಯತೆಯಿದೆ. ರವೀಂದ್ರ ಜಡೇಜರೊಂದಿಗೆ ಹರ್ಭಜನ್ ಸಿಂಗ್ ಹಾಗೂ ಅಮಿತ್ ಮಿರ್ಶಾ ಇಬ್ಬರು ಪ್ರಮುಖ ಸ್ಪಿನ್ನರ್‌ಗಳಾಗಿದ್ದಾರೆ.
ಈಗ ನಡೆಯುತ್ತಿರುವ ಐಪಿಎಲ್‌ನಲ್ಲಿ ಮಿಂಚುತ್ತಿರುವ ಕುೃನಾಲ್ ಪಾಂಡ್ಯ ಸಹೋದರ ಹಾರ್ದಿಕ್ ಪಾಂಡ್ಯ ಬದಲಿಗನಾಗಿ ತಂಡಕ್ಕೆ ಸೇರುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ನ 11ರ ಬಳಗದಲ್ಲಿ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ.







