ಲೇಖಕಿ ಗುಡಿಬಂಡೆ ಪೂರ್ಣಿಮಾರಿಗೆ ಡಾ.ಅನುಪಮಾ ನಿರಂಜನ ಪ್ರಶಸ್ತಿ ಪ್ರದಾನ
ಬೆಂಗಳೂರು, ಮೇ 17: ಕನ್ನಡ ಸಾಹಿತ್ಯ ಕೃಷಿಯಲ್ಲಿ ಲೇಖಕಿಯರಲ್ಲಿ ಪ್ರಥಮ ಬಾರಿಗೆ ಬಂಡಾಯ ಮತ್ತು ತಾತ್ವಿಕ ಲೇಖನಗಳನ್ನು ಹುಟ್ಟುಹಾಕಿದ್ದು ಡಾ.ಅನುಪಮಾ ನಿರಂಜನ ಎಂದು ಹಿರಿಯ ಲೇಖಕಿ ಡಾ.ವರದಾ ಶ್ರೀನಿವಾಸ್ ತಿಳಿಸಿದ್ದಾರೆ.
ಮಂಗಳವಾರ ನಗರದ ಕಸಾಪದಲ್ಲಿ ಕನ್ನಡ ಸಂಘರ್ಷ ಸಮಿತಿ ಡಾ.ಅನುಪಮಾ ನಿರಂಜನ ಅವರ 83ನೆ ಹುಟ್ಟು ಹಬ್ಬದ ಸ್ಮರಣಾರ್ಥ ಆಯೋಜಿಸಿದ್ದ ಡಾ.ಅನುಪಮಾ ನಿರಂಜನ ಪ್ರಶಸ್ತಿ ಪ್ರದಾನ ಮತ್ತು ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲೇಖಕಿ ಡಾ.ಅನುಪಮಾ ನಿರಂಜನರ ಲೇಖನಗಳು ಬಂಡಾಯ ಮತ್ತು ತಾತ್ವಿಕತೆಯನ್ನು ಹೊಂದಿದ್ದವು. ಅವರ ಸಾಹಿತ್ಯ ಯಾವ ಕಾಲಘಟ್ಟಕ್ಕೂ ಆದರ್ಶನೀಯವಾದದ್ದು ಮತ್ತು ಇಂದಿನ ಯುವ ಲೇಖಕಿಯರು ಅನುಕರಣೆ ಮಾಡುವಂತದ್ದು ಎಂದು ಪ್ರತಿಪಾದಿಸಿದರು.
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂಪ ನಾಗರಾಜಯ್ಯ ಮಾತನಾಡಿ, ಲೇಖಕಿ ಡಾ.ಅನುಪಮ ನಿರಂಜನ ವೈದ್ಯ ವೃತ್ತಿಯನ್ನು ತೊರೆದು ಕನ್ನಡ ಸಾಹಿತ್ಯಕ್ಕೆ ಹೆಚ್ಚು ಕೊಡುಗೆಗಳನ್ನು ನೀಡಿದ್ದಾರೆ. ಇವರು ಸಾಹಿತ್ಯವನ್ನು ಬಹಳ ವೌಖಿಕವಾಗಿ ಬರೆಯುತ್ತಿದ್ದರು. ಇಂತಹ ಉತ್ತಮ ಲೇಖಕಿಯನ್ನು ನೆನಪು ಮಾಡಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಎ.ಆರ್.ನಾರಾಯಣ ಘಟ್ಟ ರಚಿಸಿರುವ ಮಂಗಳ ಮಹಿಳೆ ಕೃತಿಯನ್ನು ಹಟ್ಟಿ ಚಿನ್ನದ ಗಣಿಯ ಅಧ್ಯಕ್ಷೆ ರಾಣಿ ಸತೀಶ್ ಲೋಕಾರ್ಪಣೆಗೊಳಿಸಿದರು.
ಡಾ.ಅನುಪಮಾ ನಿರಂಜನ ಪ್ರಶಸ್ತಿಯನ್ನು ಹಿರಿಯ ಲೇಖಕಿ ಗುಡಿಬಂಡೆ ಪೂರ್ಣಿಮಾರಿಗೆ ಪ್ರದಾನಿಸಲಾಯಿತು. ರಾಜ್ಯಮಟ್ಟದ ಕಥಾಸ್ಪರ್ಧೆ ಪ್ರಥಮ ಬಹುಮಾನವನ್ನು ಸಾವಿತ್ರಿ ಶಿ.ಹಿರೇಮಠ್(ಮಹಾದಾಸಿ) ದ್ವಿತೀಯ ಬಹುಮಾನ ಸುಧಾ ಧು.ಪಾಟೀಲ(ಬಾಡಿದ ಹೂ ಅರಳಿದಾಗ) ತೃತೀಯ ಬಹುಮಾನವನ್ನು ಜಿ.ಪಿ.ವಿದ್ಯಾರಿಗೆ (ನೆಮ್ಮದಿಯ ಜೀವನ) ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪತ್ರಕರ್ತ ರಾಮಣ್ಣ ಕೋಡಿಹೊಸಹಳ್ಳಿ, ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷೆ ಗಾಯತ್ರಿ ರಾಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.







