ಪಾಶ್ಚಿಮಾತ್ಯ ಮಾದರಿಯ ಪ್ರಜಾಸತ್ತೆ ಇರಾಕ್, ಲಿಬಿಯಕ್ಕೆ ಹೊಂದುವುದಿಲ್ಲ

ರೋಮ್, ಮೇ 17: ಸ್ಥಳೀಯ ರಾಜಕೀಯ ಸಂಸ್ಕೃತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಇರಾಕ್, ಲಿಬಿಯ ಮುಂತಾದ ದೇಶಗಳಿಗೆ ತಮ್ಮದೇ ಮಾದರಿಯ ಪ್ರಜಾಸತ್ತೆಯನ್ನು ರಫ್ತು ಮಾಡಲು ಪ್ರಯತ್ನಿಸುತ್ತಿರುವುದಕ್ಕಾಗಿ ಪಾಶ್ಚಿಮಾತ್ಯ ದೇಶಗಳನ್ನು ಪೋಪ್ ಫ್ರಾನ್ಸಿಸ್ ಟೀಕಿಸಿದ್ದಾರೆ.
ಫ್ರಾನ್ಸ್‌ನ ರೋಮನ್ ಕೆಥೊಲಿಕ್ ಪತ್ರಿಕೆ ‘ಲಾ ಕ್ರೋಯಿಕ್ಸ್’ಗೆ ಸಂದರ್ಶನವೊಂದನ್ನು ನೀಡಿದ ಫ್ರಾನ್ಸಿಸ್, ವಲಸಿಗರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಯನ್ನು ಯುರೋಪ್ ಸಲೀಸುಗೊಳಿಸಬೇಕು ಎಂದು ಹೇಳಿದರು.
ಅದೇ ವೇಳೆ, ವಲಸಿಗರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆ ಯಶಸ್ವಿಯಾಗಿದೆ ಎನ್ನುವುದಕ್ಕೆ ಲಂಡನ್‌ನ ನೂತನ ಮೇಯರ್ ಆಗಿ ಓರ್ವ ಮುಸ್ಲಿಂ ಆಯ್ಕೆಯಾಗಿರುವುದು ಉದಾಹರಣೆಯಾಗಿದೆ ಎಂದು ಪೋಪ್ ಅಭಿಪ್ರಾಯಪಟ್ಟರು.
ಅವರ ಸಂದರ್ಶನ ಸೋಮವಾರ ಪ್ರಕಟಗೊಂಡಿದೆ.
ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ವಿಜೃಂಭಿಸುತ್ತಿರುವ ಈ ದಿನಗಳಲ್ಲಿ, ತೀರಾ ಪಾಶ್ಚಿಮಾತ್ಯ ಎನಿಸುವ ಪ್ರಜಾಸತ್ತೆಯ ಮಾದರಿಯನ್ನು ಇರಾಕ್ ಮತ್ತು ಲಿಬಿಯ ಮುಂತಾದ ಬಲಿಷ್ಠ ಆಡಳಿತವಿದ್ದ ಹಾಗೂ ಬುಡಕಟ್ಟು ವ್ಯವಸ್ಥೆಯಿರುವ ದೇಶಗಳಿಗೆ ರಫ್ತು ಮಾಡುವುದನ್ನು ನಾವು ಪ್ರಶ್ನಿಸಬೇಕಾಗಿದೆ’’ ಎಂದರು.
‘‘ಅವರ ಸಂಸ್ಕೃತಿಗಳನ್ನು ಗಣನೆಗೆ ತೆಗೆದುಕೊಳ್ಳದೆ ನಾವು ಮುಂದಡಿಯಿಡಲು ಸಾಧ್ಯವಿಲ್ಲ’’ ಎಂದು ಪೋಪ್ ನುಡಿದರು.
‘‘ಓರ್ವ ಲಿಬಿಯದ ವ್ಯಕ್ತಿ ಇತ್ತೀಚೆಗೆ ನನಗೆ ಹೇಳಿದರು- ನಾವು ಒಬ್ಬ ಗಡ್ಡಾಫಿಯನ್ನು ಹೊಂದಿದ್ದೆವು. ಈಗ ನಾವು 50 ಗಡ್ಡಾಫಿಗಳನ್ನು ಹೊಂದಿದ್ದೇವೆ’’ ಎಂದು ಲಿಬಿಯದ ಮಾಜಿ ನಾಯಕ ಮುಅಮ್ಮರ್ ಗಡ್ಡಾಫಿಯನ್ನು ಉಲ್ಲೇಖಿಸುತ್ತಾ ಅವರು ಹೇಳಿದರು.
ಗಡ್ಡಾಫಿಯನ್ನು 2011ರಲ್ಲಿ ಪದಚ್ಯುತಗೊಳಿಸಿ ಹತ್ಯೆ ಮಾಡಲಾಗಿದೆ.







