ಮತ್ತೊಂದು ಮೈಲುಗಲ್ಲು ತಲುಪಿದ ಕೊಹ್ಲಿ
ಬೆಂಗಳೂರು, ಮೇ 17: ಪ್ರಸ್ತುತ ಪ್ರಚಂಚ ಫಾರ್ಮ್‌ನಲ್ಲಿರುವ ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದರು.
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ 3 ಶತಕ ಬಾರಿಸಿರುವ ಮೊದಲ ಆಟಗಾರ ಎನಿಸಿಕೊಂಡಿದ್ದ ಕೊಹ್ಲಿ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದರು.
ಕೋಲ್ಕತಾ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ 24ನೆ ಅರ್ಧಶತಕ ಪೂರೈಸಿದ ಕೊಹ್ಲಿ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಶ್ರೇಯಸ್ಸಿಗೆ ಭಾಜನರಾದರು. ಐಪಿಎಲ್‌ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ್ದ ಕ್ರಿಸ್ ಗೇಲ್(733) ಹಾಗೂ ಮೈಕಲ್ ಹಸ್ಸಿ (733)ದಾಖಲೆಯನ್ನು ಕೊಹ್ಲಿ ಮುರಿದರು.
ಕೊಹ್ಲಿ 12 ಪಂದ್ಯಗಳಲ್ಲಿ 3 ಶತಕಗಳ ಸಹಿತ 752 ರನ್ ಗಳಿಸಿದ್ದಾರೆ. ಗೇಲ್ 2012ರ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಈ ಸಾಧನೆ ಮಾಡಿದ್ದರೆ, ಹಸ್ಸಿ 2013ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಗರಿಷ್ಠ ಸ್ಕೋರ್ ಗಳಿಸಿದ ಸಾಧನೆ ಮಾಡಿದ್ದರು.
ಬಲಗೈ ದಾಂಡಿಗ ಕೊಹ್ಲಿ ಐಪಿಎಲ್ ಆವೃತ್ತಿಯೊಂದರಲ್ಲಿ 700ಕ್ಕೂ ಅಧಿಕ ರನ್ ಗಳಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡರು. ರಾಬಿನ್ ಉತ್ತಪ್ಪ 2004ರಲ್ಲಿ ಕೋಲ್ಕತಾ ತಂಡದ ಪರ 660 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.







