ಭೂಮಿಗೆ 1 ಲಕ್ಷ ಪ್ರದಕ್ಷಿಣೆ ಹಾಕಿದ ಬಾಹ್ಯಾಕಾಶ ನಿಲ್ದಾಣ
ಮಾಸ್ಕೊ, ಮೇ 17: ಅಮೆರಿಕ ಮತ್ತು ರಶ್ಯಗಳ ಸಹಯೋಗದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಸೋಮವಾರದವರೆಗೆ ಭೂಮಿಗೆ ಒಂದು ಲಕ್ಷ ಪ್ರದಕ್ಷಿಣೆಗಳನ್ನು ಹಾಕಿದೆ ಎಂದು ರಶ್ಯದ ನಿಯಂತ್ರಣ ಕೇಂದ್ರ ತಿಳಿಸಿದೆ.
‘‘ಇಂದು ಬಾಹ್ಯಾಕಾಶ ನಿಲ್ದಾಣವು ಭೂಮಿಯ ಸುತ್ತ 1 ಲಕ್ಷ ಪ್ರದಕ್ಷಿಣೆಯನ್ನು ಪೂರ್ಣಗೊಳಿಸಿದೆ’’ ಮಾಸ್ಕೊದಲ್ಲಿರುವ ನಿಯಂತ್ರಣ ಕೇಂದ್ರವು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಭೂಮಿಯಿಂದ ಸುಮಾರು 400 ಕಿ.ಮೀ. ಎತ್ತರದಲ್ಲಿ ಗಂಟೆಗೆ 28,000 ಕಿ.ಮೀ. ವೇಗದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು 90 ನಿಮಿಷಗಳಿಗೊಮ್ಮೆ ಭೂಮಿಗೆ ಪ್ರದಕ್ಷಿಣೆ ಬರುತ್ತದೆ.
ನಿಲ್ದಾಣವು ಈವರೆಗೆ 260 ಕೋಟಿ ಮೈಲಿ (ಸುಮಾರು 418 ಕೋಟಿ ಕಿಲೋಮೀಟರ್) ಕ್ರಮಿಸಿದೆ.
‘‘ಇದೊಂದು ಮಹತ್ವದ ಮೈಲಿಗಲ್ಲಾಗಿದೆ ಹಾಗೂ ಯುರೋಪ್, ರಶ್ಯ, ಕೆನಡ, ಜಪಾನ್ ಮತ್ತು ಅಮೆರಿಕಗಳ ಬಾಹ್ಯಾಕಾಶ ಸಂಸ್ಥೆಗಳ ಅಂತಾರಾಷ್ಟ್ರೀಯ ಭಾಗೀದಾರಿಕೆಗೆ ಸಂದ ಯಶಸ್ಸಾಗಿದೆ’’ ಎಂದು ಅಮೆರಿಕದ ಹಾರಾಟ ಇಂಜಿನಿಯರ್ ಜೆಫ್ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದಿಂದ ಕಳುಹಿಸಿದ ವೀಡಿಯೊ ಸಂದೇಶವೊಂದರಲ್ಲಿ ಹೇಳಿದ್ದಾರೆ.





