ಇರ್ಫಾನ್ ಪಠಾಣ್‌ಗೆ ಧೋನಿ ಸೂಕ್ತ ಅವಕಾಶ ನೀಡುತ್ತಿಲ್ಲ: ಸುನೀಲ್ ಗವಾಸ್ಕರ್

ಹೊಸದಿಲ್ಲಿ, ಮೇ 17: ರೈಸಿಂಗ್ ಪುಣೆ ಸೂಪರ್‌ಜಯಂಟ್ಸ್ ತಂಡದ ನಾಯಕ ಎಂಎಸ್ ಧೋನಿ ತನ್ನ ಬ್ಯಾಟಿಂಗ್ ಕೌಶಲಕ್ಕೆ ನ್ಯಾಯ ಒದಗಿಸಿಲ್ಲ. ವಿಶ್ವ ದರ್ಜೆಯ ಬೌಲರ್ ಇರ್ಫಾನ್ ಪಠಾಣ್‌ಗೂ ಟೂರ್ನಿಯಲ್ಲಿ ಸೂಕ್ತ ಅವಕಾಶ ನೀಡಿಲ್ಲ ಎಂದು ಟೆಸ್ಟ್ ಕ್ರಿಕೆಟ್‌ನ ಮಾಜಿ ಆರಂಭಿಕ ದಾಂಡಿಗ ಸುನೀಲ್ ಗವಾಸ್ಕರ್ ಆರೋಪಿಸಿದ್ದಾರೆ.
ಪಠಾಣ್ ಈ ವರ್ಷದ ಐಪಿಎಲ್‌ನಲ್ಲಿ ಕೇವಲ 2 ಪಂದ್ಯಗಳನ್ನು ಆಡಿದ್ದು, 7 ರನ್ ಗಳಿಸಿದ್ದಾರೆ. ಇಡೀ ಟೂರ್ನಿಯಲ್ಲಿ ಒಂದು ಓವರ್ ಬೌಲಿಂಗ್ ಮಾಡಿದ್ದಾರೆ.
ಆಲ್‌ರೌಂಡರ್ ಇರ್ಫಾನ್ ಪಠಾಣ್‌ಗೆ ಟೂರ್ನಿಯಲ್ಲಿ ಧೋನಿ ಸರಿಯಾದ ಅವಕಾಶ ನೀಡದೇ ಇರುವುದನ್ನು ಸೂಕ್ಷ್ಮವಾಗಿ ಗಮನಿಸಿರುವ ಗವಾಸ್ಕರ್, ಧೋನಿಯ ತಂತ್ರಗಾರಿಕೆಯ ಬಗ್ಗೆಯ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷದ ಐಪಿಎಲ್‌ನಲ್ಲಿ ಇರ್ಫಾನ್ ಪಠಾಣ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾಗ ಅವರಿಗೆ ಅವಕಾಶ ನೀಡಿರಲಿಲ್ಲ. ಈ ವರ್ಷವೂ ಪುಣೆ ತಂಡದಲ್ಲಿ ಅವರನ್ನು ಕಡೆಗಣಿಸಲಾಗಿದೆ. ಎಫ್‌ಡು ಪ್ಲೆಸಿಸ್, ಸ್ಟೀವ್ ಸ್ಮಿತ್ ಹಾಗೂ ಮಿಚೆಲ್ ಮಾರ್ಷ್ ಟೂರ್ನಿಯಿಂದ ಹೊರ ನಡೆದ ಹಿನ್ನೆಲೆಯಲ್ಲಿ ಎಡಗೈ ದಾಂಡಿಗ ಪಠಾಣ್‌ರನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬೇಕಾಗಿತ್ತು ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ಬರೆದಿರುವ ಅಂಕಣಬರಹದಲ್ಲಿ ಗವಾಸ್ಕರ್ ತಿಳಿಸಿದರು.





