ವಲಸೆ ತಡೆಗೆ ‘ಗ್ರಾಮಾಂತರ ರಾಯಾಭಾರಿಗಳು’ ಯೋಜನೆ: ರಾಮಚಂದ್ರಪ್ಪ
ಬೆಂಗಳೂರು, ಮೇ 17: ಗ್ರಾಮೀಣ ಪ್ರದೇಶದ ಯುವ ಜನತೆ ಪಟ್ಟಣಗಳಿಗೆ ವಲಸೆ ಬಾರದಂತೆ ತಡೆಗಟ್ಟಲು ಹಾಗೂ ನಿರುದ್ಯೋಗ ಸಮಸ್ಯೆ ಬಗೆಹರಿಸಲು ‘ದೇವರಾಜ ಅರಸು ಗ್ರಾಮಾಂತರ ರಾಯಾಭಾರಿಗಳು’ ಎಂಬ ಯೋಜನೆಯನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹೊಸದಾಗಿ ಜಾರಿಗೆ ತಂದಿದೆ.
ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ನಿಗಮದ ಅಧ್ಯಕ್ಷ ಎಂ.ರಾಮಚಂದ್ರಪ್ಪ ಮಾತನಾಡಿ, ರಾಜ್ಯ ಸರಕಾರವು ಅತಿ ಹಿಂದುಳಿದ ತಾಲೂಕುಗಳಲ್ಲಿ ಯುವ ಜನರ ಆರ್ಥಿಕ ಸಶಕ್ತೀಕರಣಕ್ಕಾಗಿ 10 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಅಲ್ಲದೆ, ಪ್ರಾಯೋಗಿಕವಾಗಿ ರಾಮನಗರ ಮತ್ತು ತುಮಕೂರು ಜಿಲ್ಲೆಗಳ ಅತಿ ಹಿಂದುಳಿದ ಹಳ್ಳಿಗಳಲ್ಲಿ ಈಗಾಗಲೇ ಚಾಲನೆ ನೀಡಿದ್ದು, ಉತ್ತಮ ಸ್ಪಂದನೆ ಬಂದಿದೆ ಎಂದು ಹೇಳಿದರು.
ಕರ್ನಾಟಕದ 29 ಸಾವಿರ ಹಳ್ಳಿಗಳಲ್ಲಿ ಹತ್ತನೆ ತರಗತಿ ಉತ್ತೀರ್ಣವಾಗಿರುವ ಯುವಕರನ್ನು ಗಮನದಲ್ಲಿಟ್ಟುಕೊಂಡು ಗ್ರಾಮೀಣ ರಾಯಭಾರಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಲ್ಲಿ ಪ್ರಸ್ತುತ ಸಾಲಿನ ಅಂತ್ಯದೊಳಗೆ ಜಾರಿಗೊಳಿಸಲಾಗುವುದು ಎಂದ ಅವರು, ಇಂತಹ ಯೋಜನೆಗಳು ಯುವ ಜನತೆಯ ಸೃಜನಶೀಲ ಚಟುವಟಿಕೆ ಗಳನ್ನು ಬೆಂಬಲ ನೀಡುತ್ತವೆ ಎಂದು ಅವರು ಹೇಳಿದರು.
ನಿಗಮದ ಯೋಜನೆಯಡಿ 2015ನೆ ಸಾಲಿನಲ್ಲಿ ರಾಜ್ಯ ಸರಕಾರ 200 ಕೋಟಿ ರೂ.ಅನುದಾನ ನೀಡಿತ್ತು. ಈ ಪೈಕಿ 55,670 ಫಲಾನುಭವಿಗಳಿಗೆ ನೆರವು ನೀಡಲಾಗಿದೆ. ಅದೇ ರೀತಿ, ಪ್ರಸ್ತುತ ಸಾಲಿನಲ್ಲಿರುವ 300 ಕೋಟಿ ರೂ. ಅನುದಾನದಲ್ಲಿ 67,795 ಫಲಾನುಭವಿಗಳಿಗೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.