ಕೇವಲ 99 ರೂ.ಗಳ ‘ನಮೋಟೆಲ್’ ಆ್ಯಂಡ್ರಾಯ್ಡಾ ಮೊಬೈಲ್ ಮಾರುಕಟ್ಟೆಗೆ
ಬೆಂಗಳೂರು, ಮೇ 17: 250 ರೂ.ಗೆ ‘ಫ್ರೀಡಂ’ ಎಂಬ ಮೊಬೈಲ್ ನೀಡುತ್ತೇವೆ ಎಂದು ಇತ್ತೀಚೆಗೆ ದೇಶದಾದ್ಯಂತ ಭಾರೀ ಸುದ್ದಿ ಮಾಡಿ ವಿವಾದಕ್ಕೊಳಗಾಗಿ ಕಂಪೆನಿಯೊಂದು ವಂಚನೆ ಆರೋಪ ಎದುರಿಸಿದ ಬೆನ್ನಿಗೇ ಇದೀಗ ನಮೋ ಟೆಲ್ ಕಂಪೆನಿಯಿಂದ ಕೇವಲ 99 ರೂ.ಗಳಿಗೆ 4 ಸಾವಿರ ರೂ. ಬೆಲೆ ಬಾಳುವ ಆ್ಯಂಡ್ರಾಯ್ಡಾ ಮೊಬೈಲ್‌ನ್ನು ಇಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಮೊಬೈಲ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಸಂಸ್ಥೆಯ ಸಿಇಒ ಮಾಧವ ರೆಡ್ಡಿ, ಸಾಮಾನ್ಯ ಜನರು ಸಾವಿರಾರು ರೂ.ಗಳಷ್ಟು ಹಣವನ್ನು ವ್ಯಯಿಸಿ ಮೊಬೈಲ್ ಕೊಳ್ಳಲಾಗುವುದಿಲ್ಲ. ಆ ನಿಟ್ಟಿನಲ್ಲಿ ಎಲ್ಲರಿಗೂ ಮೊಬೈಲ್ ಸೇವೆಯನ್ನು ಕಲ್ಪಿಸುವ ಉದ್ದೇಶದಿಂದ ಕೇವಲ 99 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು.
‘ನಮೋಟೆಲ್’ ಮೊಬೈಲ್ ಸಾಮಾನ್ಯ ಮೊಬೈಲ್ ರೀತಿಯಲ್ಲಿಯೇ ಸೇವೆಯನ್ನು ನೀಡಲಾಗುತ್ತದೆ. 5.1 ಆ್ಯಂಡ್ರಾಯ್ಡಾ ಆಪರೇಟಿಂಗ್ ಸಿಸ್ಟಮ್ ಹೊಂದಿದ್ದು, 4 ಇಂಚು ಉದ್ದ, ವಿಜಿಎ ಫ್ರೆಂಟ್ ಕ್ಯಾಮೆರಾ, 2 ಮೆಗಾ ಫಿಕ್ಸೆಲ್ ಕ್ಯಾಮೆರಾ, 1 ಜಿಬಿ ರ್ಯಾಮ್, 4ಜಿಬಿ ಸ್ಟೋರೇಜ್ ಸಾಮರ್ಥ್ಯ ಹೊಂದಿದ್ದು, ಡಬಲ್ ಸಿಮ್ ಹೊಂದಲಾಗಿದೆ ಎಂದು ತಿಳಿಸಿದರು.
ಪಡೆಯುವುದು ಹೇಗೆ: ಮೊದಲು bemybanker.comನಲ್ಲಿ ಲಾಗಿನ್ ಮೂಲಕ 199 ರೂ ಹಣ ಪಾವತಿ ಮಾಡಿ, ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಪಡೆಯಬೇಕು. ನಂತರ ಹಣ ಸಂದಾಯವಾದ ಮೇಲೆ BMB-Reference ID ಸಿಗುತ್ತದೆ. ಇದನ್ನು ಬಳಸಿಕೊಂಡು www.namotel.comಗೆ ನೋಂದಾಯಿಸಿಕೊಳ್ಳಬೇಕು. ನಿಮ್ಮ ಭಾವಚಿತ್ರ ಮತ್ತು ಆಧಾರ್ ಕಾರ್ಡ್ ಅನ್ನು ಅಪ್‌ಲೋಡ್ ಮಾಡಬೇಕು. ಇದು ಅಪ್‌ಲೋಡ್ ಆದ ನಂತರ ನಿಮಗೆ ಇ-ಮೇಲ್ ಮಾಹಿತಿಯನ್ನು ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಮಹದೇವರೆಡ್ಡಿ 96209 00007 ಈ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಹೇಳಿದರು.