3 ಟನ್ ಪ್ಲಾಸ್ಟಿಕ್ ವಶ: ಒಂದು ಲಕ್ಷ ದಂಡ
ಬಿಬಿಎಂಪಿ ಅಧಿಕಾರಿಗಳ ಕಾರ್ಯಾಚರಣೆ
ಬೆಂಗಳೂರು, ಮೇ 17: ಕಲಾಸಿ ಪಾಳ್ಯದ ನ್ಯೂ ಎಕ್ಸ್‌ಟೆನ್ಷನ್‌ನ ಗೋದಾಮು ಒಂದರಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಾಲಿಕೆಯ ಆರೋಗ್ಯಾಧಿಕಾರಿಗಳ ತಂಡ ಒಂದು ಲಕ್ಷ ರೂ. ವೌಲ್ಯದ ಮೂರು ಟನ್ ಹೆಚ್ಚು ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ.ಮನೋರಂಜನ್ ಹೆಗಡೆ ನೇತೃತ್ವದಲ್ಲಿ ಪಾಲಿಕೆ ಅಧಿಕಾರಿಗಳ ತಂಡ ದಾಳಿ ಮಾಡಿದರು. ಕಲಾಸಿಪಾಳ್ಯದಲ್ಲಿರುವ ಚಿಂತಾಮಣಿ ಮಾರ್ಕೆಟಿಂಗ್ ಸಂಸ್ಥೆಯಲ್ಲಿನ 4 ಅಂತಸ್ತುಗಳಲ್ಲಿ ಸಂಗ್ರಹಿಸಿದ್ದ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಕ್ಕೆ ಪಡೆಯಲಾಯಿತು.
ಕಳಪೆ ಉತ್ಪನ್ನಗಳನ್ನು ಬಳಕೆ ಮಾಡಿದರೆ ಭಾರಿ ಮೊತ್ತದ ದಂಡ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದೆ. ಆದರೂ, ಕೆಲವು ವ್ಯಾಪಾರಿಗಳು ಕದ್ದು ಮುಚ್ಚಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಹಾಗಾಗಿ ನಾವು ನಮ್ಮ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ ಎಂದು ಆರೋಗ್ಯಾಧಿಕಾರಿ ಡಾ. ಮನೋರಂಜನ್ ತಿಳಿಸಿದರು.
ಇದೇ ರೀತಿಯಲ್ಲಿ ಇನ್ನು ಮುಂದೆ ಎಲ್ಲಾದರೂ ಪ್ಲಾಸ್ಟಿಕ್ ಉತ್ಪನ್ನಗಳ ಮಾರಾಟ ಕಂಡು ಬಂದರೆ ದಿಢೀರ್ ದಾಳಿ ಮಾಡಲಾಗುತ್ತದೆ. ಆದುದರಿಂದ ವ್ಯಾಪಾರಿಗಳು ಎಚ್ಚರಿಕೆಯಿಂದ ಉತ್ತಮ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಬೇಕು. ಒಂದು ವೇಳೆ ಪ್ಲಾಸ್ಟಿಕ್ ಮಾರಾಟ ಕಂಡು ಬಂದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.







