ಮಾಲೆಗಾಂವ್ ಸ್ಫೋಟ: ಅನುಮಾನಗಳಿಗೆ ತೆರೆ ಎಳೆದೀತೇ ಆರೋಪಪಟ್ಟಿ?

ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ 2008ರಲ್ಲಿ ನಡೆದ ಬಾಂಬ್ ದಾಳಿ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 2016ರ ಮೇ 13ರಂದು ಪೂರಕ ಆರೋಪಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ದೊಡ್ಡ ತಲೆ ನೋವನ್ನು ನ್ಯಾಯಾಂಗ ವ್ಯವಸ್ಥೆಗೆ ವರ್ಗಾಯಿಸಿದಂತಿದೆ. ಈ ಹೊಸ ಆರೋಪಪಟ್ಟಿಯು ಹಿಂದೆ ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ಪಡೆ 2009ರ ಜನವರಿ 20 ಹಾಗೂ 2011ರ ಎಪ್ರಿಲ್ 21ರಂದು 14 ಮಂದಿ ಆರೋಪಿಗಳ ವಿರುದ್ಧ ಸಲ್ಲಿಸಿದ್ದ ಎರಡು ಆರೋಪಪಟ್ಟಿಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಎಟಿಎಸ್ ಈ ಪ್ರಕರಣದ ಸಂಬಂಧ ಸಲ್ಲಿಸಿರುವ 5,000 ಪುಟಗಳ ಪುರಾವೆ ಹಾಗೂ ಎನ್‌ಐಎ ಸಲ್ಲಿಸಿರುವ 133 ಪುಟಗಳ ಪೂರಕ ಆರೋಪಪಟ್ಟಿಯ ಅಂಶಗಳನ್ನು ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಇದೀಗ ಮನವಿ ಮಾಡಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ 2011ರಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಂಡಿತ್ತು. ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಮೋಕಾ)ಯನ್ನು ವಾಪಸು ಪಡೆಯುವ ಸಲುವಾಗಿ ಹಾಗೂ ಪ್ರಜ್ಞಾಸಿಂಗ್ ಠಾಕೂರ್ ಸೇರಿದಂತೆ ಆರು ಮಂದಿಯ ವಿರುದ್ಧದ ಪ್ರಕರಣವನ್ನು ಕೈಬಿಡಲು ಎನ್‌ಐಎ ಬಯಸಿದೆ. ಪೂರಕ ಆರೋಪಪಟ್ಟಿಯ ಬಗ್ಗೆ ಮೂರು ಪುಟಗಳ ಹೇಳಿಕೆಯನ್ನು ಎನ್‌ಐಎ ಬಿಡುಗಡೆ ಮಾಡಿದ್ದು, ಇದು ಅಂತಿಮ ವರದಿ ಎಂದು ಘೋಷಿಸಿ, ತನ್ನ ವೆಬ್‌ಸೈಟ್‌ನಲ್ಲಿ ಇದನ್ನು ಪ್ರಕಟಿಸಿದೆ. ಇದರಲ್ಲಿ 10 ಮಂದಿಯ ವಿರುದ್ಧ ಆರೋಪ ಹೊರಿಸಲಾಗಿದ್ದು, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್ ಕೂಡಾ ಇದರಲ್ಲಿ ಸೇರಿದ್ದಾರೆ. ಆದರೆ ಮೋಕಾ ಕಾಯ್ದೆಯಡಿ ಯಾವ ಅಪರಾಧವೂ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಹೇಗಿದ್ದರೂ ಸುಪ್ರೀಂಕೋರ್ಟ್, 2015ರ ಎಪ್ರಿಲ್ 16ರಂದು ಈ ಬಗ್ಗೆ ಆದೇಶ ನೀಡಿ, ಈ ಪ್ರಕರಣಕ್ಕೆ ಮೋಕಾ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ, ಠಾಕೂರ್ ಹಾಗೂ ಪುರೋಹಿತ್ ಅವರನ್ನು ತಕ್ಷಣ ಬಿಡುಗಡೆ ಮಾಡಲಾಗುತ್ತದೆ ಎಂಬ ದಟ್ಟವಾದ ವದಂತಿ ಮುಂಬೈನಲ್ಲಿ ಹಬ್ಬಿತ್ತು. ಆದರೆ ಯಾರ ವಿರುದ್ಧದ ಆರೋಪವನ್ನು ವಜಾ ಮಾಡಲು ಕೂಡಾ ಎನ್‌ಐಎಗೆ ಅಧಿಕಾರವಿಲ್ಲ. ಕೇವಲ ನ್ಯಾಯಾಲಯಕ್ಕೆ ಮಾತ್ರ ಆ ಅಧಿಕಾರವಿದ್ದು, ಇದು ಕೂಡಾ ನ್ಯಾಯಾಂಗ ಪರಾಮರ್ಶೆಗೆ ಒಳಪಡುತ್ತದೆ ಎಂಬ ವಾಸ್ತವ ಆ ಬಳಿಕ ಅರಿವಾಯಿತು.
ಎಟಿಎಸ್ ಹಾಗೂ ಎನ್‌ಐಎ ತನಿಖೆ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಉದ್ದೇಶ ನನಗಿಲ್ಲ ಅಥವಾ ಈಗ ಸಲ್ಲಿಕೆಯಾಗಿರುವ ಪುರಾವೆ ಎಷ್ಟರ ಮಟ್ಟಿಗೆ ಯೋಗ್ಯ ಎಂದು ನಿರ್ಧರಿಸುವುದು ಕೂಡಾ ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ಅದಾಗ್ಯೂ ಕೆಲ ಘಟನಾವಳಿಗಳನ್ನು ಗಮನಿಸಿದಾಗ, ಈ ಪ್ರಕರಣದಲ್ಲಿ ರಾಜಕೀಯ ಪ್ರಭಾವ ದಟ್ಟವಾಗಿರುವುದು ಸಹಜವಾಗಿಯೇ ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಲು ಕಾರಣವಾಗಿದೆ.
ಸರಣಿ ತಿರುವುಗಳು
ಈ ಪ್ರಕರಣದ ಮಹತ್ವದ ತಿರುವು ಪಡೆದಿರುವುದು ಹಾಗೂ ಮೂಲ ತನಿಖೆಯ ಅಂಶಗಳನ್ನು ತಿರುಚಿರುವ ಅಂಶವನ್ನು ಎನ್‌ಐಎ ಅಲ್ಲಗಳೆಯಲಾಗದು. 2015ರ ಜೂನ್‌ನಲ್ಲಿ ಪ್ರಕರಣದ ಸಂಬಂಧ ದೊಡ್ಡ ಬೆಳವಣಿಗೆ ಸಂಚಲನ ಮೂಡಿಸಿತು. ಈ ಪ್ರಕರಣವನ್ನು ನಿಧಾನವಾಗಿ ನಿರ್ವಹಿಸುವಂತೆ ತಮ್ಮ ಮೇಲೆ ಹೊಸ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಒತ್ತಡ ಹೆಚ್ಚುತ್ತಿದೆ. ಈ ಕಾರಣಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಬಯಸಿರುವುದಾಗಿ ವಿಶೇಷ ಸಾರ್ವಜನಿಕ ಅಭಿಯೋಜಕಿ ರೋಹಿಣಿ ಸಾಲ್ಯಾನ್ 2015ರ ಜೂನ್‌ನಲ್ಲಿ ಬಾಂಬ್ ಸಿಡಿಸಿದ್ದರು. 2015ರ ಅಕ್ಟೋಬರ್‌ನಲ್ಲಿ ಸಾಲ್ಯಾನ್ ಈ ಸಂಬಂಧ ಅಫಿದವಿತ್ ಸಲ್ಲಿಸಿ, ಪ್ರಕರಣದಲ್ಲಿ ನಿಧಾನ ನೀತಿ ಅನುಸರಿಸುವಂತೆ ತಮ್ಮ ಮೇಲೆ ಯಾವ ಎನ್‌ಐಎ ಅಧಿಕಾರಿ ಸೂಚನೆ ನೀಡಿದ್ದರು ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಅರ್ಜಿದಾರರೊಬ್ಬರು ಮುಂಬೈ ಹೈಕೋರ್ಟ್‌ನಲ್ಲಿ ಈ ಸಂಬಂಧ ಎನ್‌ಐಎ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿ, ನ್ಯಾಯಾಂಗ ಪ್ರಕ್ರಿಯೆಗೆ ಅಡ್ಡಿ ತರುವ ಪ್ರಯತ್ನ ಇದು ಎಂದು ವಾದಿಸಿದ್ದರು. ಈ ಕಾರಣದಿಂದ ಪ್ರಕರಣದಲ್ಲಿ ಅಭಿಯೋಜನೆ ನಿಲುವು ದುರ್ಬಲವಾಗುತ್ತಿದೆ ಎನ್ನುವುದು ಅರ್ಜಿದಾರರ ವಾದವಾಗಿತ್ತು. ಈ ತಿಂಗಳ ಆರಂಭದಲ್ಲಿ, ಎನ್‌ಐಎ ಮುಖ್ಯಸ್ಥ ಶರದ್ ಕುಮಾರ್ ಅವರು ಪ್ರಮುಖ ದೈನಿಕವೊಂದಕ್ಕೆ ಹೇಳಿಕೆ ನೀಡಿ, ‘‘ಸಾಲ್ಯಾನ್ ಅವರ ಕ್ಷಮತೆಯನ್ನು ಪರಾಮರ್ಶೆ ನಡೆಸಿದ ಬಳಿಕ ಅವರನ್ನು ಕೈಬಿಡಲಾಗಿದೆ’’ ಎಂದು ಘೋಷಿಸಿದ್ದರು. ಎನ್‌ಐಎ ನಿರ್ಧಾರ ಮಹಾರಾಷ್ಟ್ರ ಪೊಲೀಸ್ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ದಾವೂದ್ ಇಬ್ರಾಹೀಂ ಬಂಟನೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಲಾದ 1992ರ ಜೆ.ಜೆ.ಆಸ್ಪತ್ರೆ ಶೂಟಿಂಗ್ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸರಕಾರದ ಪರ ಸಮರ್ಥ ವಾದ ಮಂಡಿಸಿದ್ದ ಸಾಲ್ಯಾನ್ ಅವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿತ್ತು.
ಜೊತೆಗೆ, ಏಳು ಮಂದಿ ಸಾಕ್ಷಿಗಳು ಮ್ಯಾಜಿಸ್ಟ್ರೇಟರ ಮುಂದೆ ದಾಖಲಿಸಿದ ಹೇಳಿಕೆಗಳ ದಾಖಲೆಗಳು ಎನ್‌ಐಎ ವಿಶೇಷ ನ್ಯಾಯಾಲಯದಿಂದ ನಾಪತ್ತೆಯಾಗಿವೆ ಎಂಬ ವರದಿಗಳು ಎಪ್ರಿಲ್‌ನಲ್ಲಿ ಮಾಧ್ಯಮಗಳಲ್ಲಿ ಪ್ರಕಟವಾದವು. ಹೀಗೆ ಮಾಯವಾದ ಕಡತಗಳಲ್ಲಿ, ಈ ಪ್ರಕರಣದ ಆರೋಪಿ ಹಾಗೂ ಪ್ರಜ್ಞಾಸಿಂಗ್ ಠಾಕೂರ್ ಉಜ್ಜಯಿನಿಯಲ್ಲಿ 2008ರಲ್ಲಿ ಭೇಟಿಯಾಗಿದ್ದರು ಎಂದು ಸಾಕ್ಷಿದಾರರೊಬ್ಬರು ನೀಡಿದ ಹೇಳಿಕೆಯೂ ಸೇರಿತ್ತು. ಅಂತೆಯೇ 2007ರಲ್ಲಿ ನಾಸಿಕ್‌ನಲ್ಲಿ ಪುರೋಹಿತ್ ಹಾಗೂ ಠಾಕೂರ್ ಭೇಟಿಯಾಗಿದ್ದರು ಎಂದು ‘ಅಭಿನವ್ ಭಾರತ್’ ಪದಾಧಿಕಾರಿಯೊಬ್ಬರು ನೀಡಿದ್ದ ಹೇಳಿಕೆಯ ಕುರಿತ ಕಡತ ಕೂಡಾ ನಾಪತ್ತೆಯಾಗಿತ್ತು. ಇವುಗಳ ಪತ್ತೆಯಾಗಿ ಎನ್‌ಐಎ ಮೂರು ತಂಡಗಳನ್ನು ರಚಿಸಿದೆ ಎಂದು ಕೂಡಾ ವರದಿ ಹೇಳಿತ್ತು. ಆದರೆ ಈ ವರದಿಯ ಖಚಿತತೆ ಬಗ್ಗೆ ಎನ್‌ಐಎ ಇದುವರೆಗೆ ಯಾವ ಹೇಳಿಕೆಯನ್ನೂ ನೀಡಿಲ್ಲ ಎನ್ನುವುದು ಗಮನಾರ್ಹ ಅಂಶ. ಸಾರ್ವಜನಿಕ ಸುರಕ್ಷತೆ ಕುರಿತ ವಿಚಾರಗಳಲ್ಲಿ ಸಾರ್ವಜನಿಕರಿಂದ ವಿಷಯಗಳನ್ನು ಮುಚ್ಚಿಡುವ ಸಂಪ್ರದಾಯ ನಮ್ಮ ದೇಶದಲ್ಲಿ ಬಹಳಷ್ಟು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದಾಗ್ಯೂ ಮೇ 4ರಂದು ಪ್ರಕಟವಾದ ಒಂದು ವರದಿಯ ಪ್ರಕಾರ, ಹಿಂದೆ ಮ್ಯಾಜಿಸ್ಟ್ರೇಟರ ಮುಂದೆ ಹೇಳಿಕೆ ನೀಡಿದ್ದ ಸಾಕ್ಷಿಗಳು ಇದೀಗ ಅದನ್ನು ಅಲ್ಲಗಳೆದಿದ್ದು, ಹೊಸದಿಲ್ಲಿಯಲ್ಲಿ ಮ್ಯಾಜಿಸ್ಟ್ರೇಟರ ಮುಂದೆ ಹೊಸ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಇದೇ ನಿಯತಕಾಲಿಕ 1016ರ ಮೇ 14ರಂದು ಇನ್ನೊಂದು ವರದಿ ಪ್ರಕಟಿಸಿ, ಇಡೀ ಪ್ರಕರಣ ಶಿಥಿಲಗೊಳಿಸುವ ಹುನ್ನಾರದ ಅಂಗವಾಗಿ ಈ ನಾಪತ್ತೆ ಹೇಳಿಕೆ ನೀಡಲಾಗಿದೆ ಎಂದು ಹೇಳಿತು.
ತಮ್ಮ ವಿರುದ್ಧ ಮೋಕಾ ಕಾಯ್ದೆ ಅನ್ವಯಿಸುವುದನ್ನು ತಡೆಯಬೇಕು ಎನ್ನುವುದೂ ಸೇರಿದಂತೆ ಪ್ರಕರಣದ ಕೆಲ ಆರೋಪಿಗಳು ಮೇಲ್ಮಟ್ಟದ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ, 2015ರ ಎಪ್ರಿಲ್‌ವರೆಗೂ ಯಾವ ತನಿಖೆಯನ್ನೂ ಕೈಗೊಂಡಿರಲಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬಂದ ಬಳಿಕ ತ್ರಾಸದಾಯಕ ತನಿಖೆಯನ್ನು ಅತ್ಯಂತ ವೃತ್ತಿಪರವಾಗಿ ಕೈಗೊಂಡು ಅಂತಿಮ ನಿರ್ಧಾರಕ್ಕೆ ಬರಲಾಗಿದೆ ಎಂದು ಎನ್‌ಐಎ ಪ್ರಕಟಿಸಿದೆ. ಆದಾಗ್ಯೂ ಮಾಧ್ಯಮಗಳಲ್ಲಿ, ‘‘ಹೇಮಂತ್ ಕರ್ಕರೆಯವರ ತನಿಖೆ ಸಂಶಯಾಸ್ಪದ ಎಂದು ಎನ್‌ಐಎ ಹೇಳಿಕೆ ನೀಡಿದೆ ಎಂಬ ವರದಿಗಳು ಪ್ರಕಟವಾದವು. ಜತೆಗೆ ಎನ್‌ಐಎ, ಎಟಿಎಸ್ ತನಿಖಾ ವರದಿಯನ್ನು ಕಸದ ಬುಟ್ಟಿಗೆ ಹಾಕಿದೆ ಎಂಬ ವರದಿಗಳೂ ಮಾಧ್ಯಮಗಳಲ್ಲಿ ಪ್ರಕಟವಾದವು. ಮೇ 14ರಂದು ಪ್ರಕಟವಾದ ಇನ್ನೊಂದು ವರದಿಯ ಪ್ರಕಾರ, ‘‘ಪುರೋಹಿತ್ ಅವರು ತಮಗೆ ಅನ್ಯಾಯವಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ದೂರು ನೀಡಿದ್ದಾರೆ.’’ ಇದೇ ವರದಿಯಲ್ಲಿ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಹಾಗೂ ಹಾಲಿ ಬಿಜೆಪಿ ಸಂಸದ ಸತ್ಯಪಾಲ್ ಸಿಂಗ್ ಅವರ ಪ್ರತಿಕ್ರಿಯೆಯನ್ನೂ ಉಲ್ಲೇಖಿಸಲಾಗಿದೆ. ‘‘ಕರ್ಕರೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಮುಖಂಡರ ರಾಜಕೀಯ ಒತ್ತಡಕ್ಕೆ ಮಣಿದು ಪ್ರಜ್ಞಾ ಠಾಕೂರ್ ಅವರನ್ನು ಬಂಧಿಸಿದ್ದರು ಎಂದು ಸಿಂಗ್ ಹೇಳಿಕೆ ನೀಡಿದ್ದರು’’ ಎಂದು ವರದಿ ಉಲ್ಲೇಖಿಸಿದೆ.
ಅಚ್ಚರಿಯ ವಿಷಯವೆಂದರೆ ಕೆಲ ವರದಿಗಳ ಪ್ರಕಾರ, ಎಟಿಎಸ್ ಸಂಗ್ರಹಿಸಿದ್ದ ಪುರಾವೆಗಳಿಗೆ ಅನುಗುಣವಾಗಿಯೇ ಎನ್‌ಐಎ ಪೂರಕ ಆರೋಪಪಟ್ಟಿ ಸಲ್ಲಿಸಿವೆ. ಮೇ 15ರಂದು ಪ್ರಕಟವಾದ ವರದಿಗಳ ಪ್ರಕಾರ, ‘‘ಪುರೋಹಿತ್ ಅವರು 2006ರಲ್ಲಿ ನಿಯೋಜಿತ ಸೇನಾ ಅಧಿಕಾರಿಯಾಗಿದ್ದರೂ, ನಿಯಮಗಳನ್ನು ಉಲ್ಲಂಘಿಸಿ ‘ಅಭಿನವ ಭಾರತ’ ಸಂಘಟನೆ ಜತೆ ಕೈಜೋಡಿಸಿದ್ದರು. ದೇಶಭ್ರಷ್ಟರಾಗಿ ಇಲ್ಲಿಂದ ಗಡಿಪಾರಾಗಿ ವಿದೇಶದಲ್ಲಿ ಸರಕಾರ ರಚಿಸುವ ಯೋಚನೆಯಲ್ಲಿದ್ದರು. ಪುರೋಹಿತ್ ವಿರುದ್ಧದ ವಿಚಾರಣೆ ಮುಂದುವರಿಸಲು ಸಾಕಷ್ಟು ಪುರಾವೆಗಳಿವೆ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ಸ್ಪಷ್ಟಪಡಿಸಲಾಗಿದೆ’’
ಎನ್‌ಐಎ ಆರೋಪಿಸಿರುವಂತೆ ದಿವಂಗತ ಹೇಮಂತ್ ಕರ್ಕರೆ ನೇತೃತ್ವದ ಎಟಿಎಸ್ ಈ ದಾಳಿಯ ಹಿಂದೆ ಹಿಂದೂ ಉಗ್ರಗಾಮಿಗಳ ಕೈವಾಡ ಇರುವುದನ್ನು ರಾಜಕೀಯ ಕಾರಣಕ್ಕೆ ಶೋಧಿಸಿತೇ? ದುರದೃಷ್ಟವಶಾತ್, ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು ಕರ್ಕರೆ ಇಂದು ನಮ್ಮೆಂದಿಗೆ ಇಲ್ಲ. ನವೆಂಬರ್ 26ರ ಮುಂಬೈ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ. ಅವರ ಘನತೆಗೆ ಮಸಿ ಬಳಿಯುವ ಇಂಥ ಹುನ್ನಾರ ನಿಜಕ್ಕೂ ವಿಷಾದನೀಯ. ಇದರ ಜತೆಗೆ 2008ರ ಜನವರಿಯಲ್ಲಿ ಕರ್ಕರೆ ಅಧಿಕಾರ ಸ್ವೀಕರಿಸುವ ಮೊದಲು ಕೂಡಾ ಹಿಂದೂ ಉಗ್ರಗಾಮಿ ದೃಷ್ಟಿಕೋನ ಬಲವಾಗಿ ಇತ್ತು ಎನ್ನುವುದನ್ನು ಹಲವು ಅಂಶಗಳು ದೃಢಪಡಿಸುತ್ತವೆ. ಇದಕ್ಕಾಗಿ ಈ ಅವಧಿಯ ಇತಿಹಾಸವನ್ನು ವಿಶ್ಲೇಷಿಸಬೇಕಾಗಿದೆ.







