ಹನಿಮೂನ್ ಮುಗಿಸಿ ಬಂದ ಪತ್ನಿ ವಿಮಾನ ನಿಲ್ದಾಣದಲ್ಲಿ ಪ್ರಿಯತಮನೊಂದಿಗೆ ಪರಾರಿ !
ಶೌಚಾಲಯದ ಹೊರಗೆ ಕಾದು ಕಂಗಾಲಾದ ಪತಿ

ನವದೆಹಲಿ, ಮೇ 18: : ರಹಸ್ಯವೊಂದನ್ನು ಕೊನೆಗಳಿಗೆ ತನಕ ಹೇಗೆ ಕಾಪಾಡಬೇಕೆನ್ನುವುದಕ್ಕೆ ಈ ಮಹಿಳೆಯೇ ಜ್ವಲಂತ ನಿರ್ದಶನವೆಂದು ಹೇಳಬಹುದೇನೋ. ಅವಳ ಕುರಿತಾದ ಆಶ್ಚರ್ಯಕರ ವಿದ್ಯಮಾನ ಇಲ್ಲಿದೆ ನೋಡಿ.
ಆಕೆ ಇತ್ತೀಚೆಗೆ ಲಕ್ನೌ ಮೂಲದ ವ್ಯಕ್ತಿಯೊಬ್ಬನನ್ನು ವಿವಾಹವಾಗಿದ್ದಳು ಹಾಗೂ ಆತನೊಂದಿಗೆ ಹಿಮಾಲಯದ ತಪ್ಪಲಲ್ಲಿರುವ ಬಗ್ದೋಗ್ರಾದಲ್ಲಿ ಹನಿಮೂನಿಗೂ ಹೋಗಿದ್ದಳು. ಆದರೆ ಎಲ್ಲವೂ ಆರಂಭವಾಗಿದ್ದು ದಂಪತಿಯ ಹನಿಮೂನಿನಿಂದ. ಉತ್ತರ ಪ್ರದೇಶದ ತಮ್ಮ ಊರಿಗೆ ಪಯಣಿಸುವ ಹಾದಿಯಲ್ಲಿ ನವದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣವನ್ನು ಸೋಮವಾರ ಸಂಜೆ ತಲುಪಿದಾಗ. ಆಕೆ ನಿಲ್ದಾಣದ ವಾಶ್ ರೂಂಗೆ ತೆರಳಿದವಳು ಹಿಂದಿರುಗಿ ಬರಲೇ ಇಲ್ಲ. ಆಕೆಯ ಪತಿರಾಯ ಆಕೆಗಾಗಿ ಹೊರಗೆ ಕಾದಿದ್ದೇ ಬಂತು.
ಸುಮಾರು ಅರ್ಧ ಗಂಟೆಯ ನಂತರ ಆತ ತನ್ನ ಪತ್ನಿ ‘ನಾಪತ್ತೆ’ಯಾಗಿದ್ದಾಳೆಂದು ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ. ನಿಲ್ದಾಣದ ಸುರಕ್ಷತೆಯ ಜವಾಬ್ದಾರಿ ಹೊತ್ತಿರುವ ಸಿಐಎಸ್‌ಎಫ್ ಸಿಬ್ಬಂದಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಆತನೊಂದಿಗೆ ಪರಿಶೀಲಿಸಿದಾಗ ನೀಲಿ ಸೀರೆ ಧರಿಸಿದ್ದ ಮಹಿಳೆ ವಾಶ್ ರೂಂ ಪ್ರವೇಶಿಸಿದ್ದ ಚಿತ್ರ ಕಂಡಿತ್ತು. ಅದರೆ ವಾಶ್ ರೂಮಿನಿಂದ ಹೊರಗೆ ಬಂದವರಲ್ಲಿ ಒಬ್ಬಳು ಬುರ್ಖಾಧಾರಿ ಮಹಿಳೆಯಿದ್ದಳು. ಆ ದೃಶ್ಯವನ್ನು ಗಮನಿಸಿದ ವ್ಯಕ್ತಿ ಆಕೆಯ ಎತ್ತರ ತನ್ನ ಪತ್ನಿಯದೇ ಎತ್ತರವಾಗಿದ್ದು ಅದು ಆಕೆಯೇ ಎಂಬ ತೀರ್ಮಾನಕ್ಕೆ ಬಂದು ಬಿಟ್ಟು.
ಆ ಬುರ್ಖಾಧಾರಿ ಮಹಿಳೆ ನಿಲ್ದಾಣದ ಹೊರಗೆ ವಿಐಪಿ ಪಾರ್ಕಿಂಗ್ ಸಮೀಪ ಅಪರಿಚಿತ ವ್ಯಕ್ತಿಯೊಬ್ಬನೊಂದಿಗೆ ಮಾತನಾಡುತ್ತಿರುವ ದೃಶ್ಯವೂ ಕಂಡು ಬಂದಿದ್ದು ಅವರಿಬ್ಬರೂ ಟ್ಯಾಕ್ಸಿ ಸ್ಟ್ಯಾಂಡಿನತ್ತ ನಡೆದಾಗ ಅಲ್ಲಿ ಅವರಿಗಾಗಿ ಮತ್ತೊಬ್ಬ ವ್ಯಕ್ತಿ ಕಾದಿದ್ದ. ಮೂವರೂ ಅಲ್ಲಿನ ಜನಜಂಗುಳಿ ಹಾಗೂ ವಾಹನಗಳ ಭರಾಟೆಯಲ್ಲಿ ಮತ್ತೆ ಕಾಣದಾಗಿದ್ದರು.
ಮಹಿಳೆ ವಾಶ್ ರೂಂನೊಳಕ್ಕೆ ಹೋದಾಗ ತನ್ನ ಮೊಬೈಲ್ ಫೋನನ್ನು ಪತಿಯ ಬಳಿಯೇ ಬಿಟ್ಟಿದ್ದಳು. ಆಕೆ ತಾನಾಗಿಯೇ ಆತನನ್ನು ಬಿಟ್ಟು ಹೋಗಿರುವುದರಿಂದ ಆಕೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.







