ಸೆಕ್ಷನ್ A - ಮೇಲ್ವರ್ಗ, ಸೆಕ್ಷನ್ B - ಒಬಿಸಿ, ಸೆಕ್ಷನ್ C - ಎಸ್ಸಿ ಆಯಾ ತರಗತಿಗೆ ಅದೇ ವರ್ಗಕ್ಕೆ ಸೇರಿದ ಶಿಕ್ಷಕರು!
ಶಾಲೆಯಲ್ಲಿ ಈ ಡೆಡ್ಲಿ ಐಡಿಯಾ ಅನುಷ್ಠಾನ ಮಾಡಿದ ಪ್ರಾಂಶುಪಾಲ ಮನೆಗೆ

ಲಕ್ನೌ, ಮೇ 18: ಉತ್ತರಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿರುವ ಸೇಠ್ ಫುಲ್ ಚಂದ್ ಬಗ್ಲಾ ಇಂಟರ್ ಕಾಲೇಜಿನ ಪ್ರಿನ್ಸಿಪಾಲ್ ರಾಧೇ ಶ್ಯಾಮ್ ವರ್ಷ್ಣೆಯನ್ನು ವಿಚಿತ್ರ ಕಾರಣವೊಂದಕ್ಕೆ ಕೆಲಸದಿಂದ ವಜಾ ಮಾಡಲಾಗಿದೆ. ಆತ ಮಾಡಿದ ತಪ್ಪೇನು ಗೊತ್ತೇ? ತನ್ನ ಸಂಸ್ಥೆಯ 9ನೇ ತರಗತಿಯ ಮಕ್ಕಳನ್ನು ಜಾತಿಯಾಧಾರದಲ್ಲಿ ವಿಂಗಡಿಸಿ ಆಯಾಯ ಜಾತಿಯ ವಿದ್ಯಾರ್ಥಿಗಳ ತರಗತಿಗೆ ಆಯಾಯ ವರ್ಗಕ್ಕೇ ಸೇರಿದ ಶಿಕ್ಷಕರನ್ನು ನೇಮಿಸಿರುವುದು. ವರದಿಯೊಂದರ ಪ್ರಕಾರ ರಾಧೇ ಶ್ಯಾಮ್ ಮೇಲ್ವರ್ಗ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿತ ಜಾತಿ ವಿದ್ಯಾರ್ಥಿಗಳನ್ನು ಎ, ಬಿ, ಸಿ ವರ್ಗಗಳಾಗಿ ವಿಂಗಡಿಸಿ ಅವರಿಗೆ ಬೇರೆ ಬೇರೆ ತರಗತಿ ನಿಗದಿ ಪಡಿಸಿ ಆಯಾಯ ಜಾತಿಗಳಿಗೆ ಸೇರಿದ ಶಿಕ್ಷಕರನ್ನು ನೇಮಿಸಿದ್ದ.
ಆತನೊಂದಿಗೆ ಆತ ನೇಮಿಸಿದ ಶಿಕ್ಷಕರನ್ನು ಕೂಡ ಸೇವೆಯಿಂದ ವಜಾಗೊಳಿಸಲಾಗಿದ್ದು ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಕೃಷ್ಣ ಸಿಂಗ್ ಜಿಲ್ಲಾ ಶಾಲಾ ನಿರೀಕ್ಷಕರಿಗೆ ಆದೇಶ ನೀಡಿದ್ದಾರೆ.
ಸಿಂಗ್ ಅವರಿಗೆ ಪ್ರಿನ್ಸಿಪಾಲ್ ಕ್ರಮದ ವಿರುದ್ಧ ದೂರು ಬಂದಾಗ ಅವರು ಶಾಲೆಗೆ ಭೇಟಿ ನೀಡಿ ತನಿಖೆ ನಡೆಸಿದ್ದು ದೂರು ನಿಜವೆಂದು ಕಂಡುಕೊಂಡ ನಂತರ ಪ್ರಿನ್ಸಿಪಾಲ್ ಸಹಿತ ಸಂಬಂಧಿತರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಸಿಂಗ್ ಹೇಳುವಂತೆ ಪ್ರಿನ್ಸಿಪಾಲ್ ರಚಿಸಿದ್ದ ಎ ವಿಭಾಗದ ಮೇಲ್ವರ್ಗ ವಿದ್ಯಾರ್ಥಿಗಳ ತರಗತಿಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿದ್ದರು. ಶಾಲೆಯ ಇತರ ವಿದ್ಯಾರ್ಥಿಗಳೂ ಪ್ರಿನ್ಸಿಪಾಲ್ ಪ್ರವೇಶಾತಿ ಸಂದರ್ಭ ಹಾಗೂ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸುವ ಸಂದರ್ಭವೂ ಜಾತಿ ತಾರತಮ್ಯ ನಡೆಸುತ್ತಿದ್ದ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ ಅಧಿಕಾರಿಗಳು ತರಗತಿಗಳಲ್ಲಿ ಹಿಂದಿನಂತೆಯೇ ಎಲ್ಲಾ ವರ್ಗದ ವಿದ್ಯಾರ್ಥಿಗಳನ್ನು ಜತೆಯಾಗಿಯೇ ಕೂರಿಸುವಂತೆ ಹೇಳಿದ್ದಾರೆ.







