ಮದ್ಯದ ಅಮಲಿನಲ್ಲಿ ಯುವತಿಯ ತಲೆಗೆ ಬೀರ್ ಬಾಟಲಿಗಳಿಂದ ಹೊಡೆದ ಗುಂಪು

ಹೊಸದಿಲ್ಲಿ, ಮೇ 18 : ಪತ್ರಿಕೋದ್ಯಮ ವಿದ್ಯಾರ್ಥಿನಿ ಮತ್ತಾಕೆಯ ಸ್ನೇಹಿತನನ್ನು ಮದ್ಯದ ನಶೆಯಲ್ಲಿದ್ದ ಗುಂಪೊಂದು ಬೀರ್ ಬಾಟಲಿಗಳಿಂದ ಹಲ್ಲೆಗೈದ ಘಟನೆ ದಕ್ಷಿಣ ದೆಹಲಿಯ ಅಮರ್ ಕಾಲನಿ ಪ್ರದೇಶದಿಂದ ಮಂಗಳವಾರ ವರದಿಯಾಗಿದೆ.
ಯುವತಿಯನ್ನು ಅವಹೇಳನಗೈದು ಆ ಗುಂಪು ಏನನ್ನೋ ಆಡಿದಾಗ ಆಕೆ ತಿರುಗಿ ಬಿದ್ದಿದ್ದು ಗುಂಪು ಆಕೆಯ ಹಾಗೂ ಆಕೆಯ ಸ್ನೇಹಿತನ ತಲೆಗೆ ಬೀರ್ ಬಾಟಲಿಗಳಿಂದ ಹಲ್ಲೆಗೈದಿದೆಯೆನ್ನಲಾಗಿದೆ.
ಯುವತಿ ಪಾರ್ಟಿಯೊಂದನ್ನು ಮುಗಿಸಿ ಮಧ್ಯರಾತ್ರಿ ಮನೆಗೆ ಬಂದಾಗ ತನ್ನ ಫೋನ್ ಕಾರಿನಲ್ಲೇ ಮರೆತು ಬಂದಿರುವುದನ್ನು ತಿಳಿದು ಮತ್ತೆ ಕಾರಿನತ್ತ ನಡೆದಾಗ ಅಲ್ಲಿ ನಿಂತಿದ್ದ ಇಬ್ಬರು ಆಕೆಯನ್ನು ನೋಡಿ ಅಶ್ಲೀಲವಾಗಿ ಮಾತನಾಡಿದ್ದರೆನ್ನಲಾಗಿದೆ. ಆಕೆ ಮೊದಲು ಅವರನ್ನು ನಿರ್ಕ್ಷಿಸಿದರೂ ಅವರು ಮತ್ತೆ ಮತ್ತೆ ಆಕೆಯನ್ನು ನಿಂದಿಸತೊಡಗಿದಾಗ ಆಕೆ ಪೊಲೀಸರಿಗೆ ಕರೆ ಮಾಡುತ್ತೇನೆಂದು ಬೆದರಿಸಿದ್ದಳು. ಆಗ ಅವರೊಂದಿಗೆ ಮತ್ತೆ ಮೂವರು ಸೇರಿಕೊಂಡು ಆಕೆ ಮತ್ತು ಆಕೆಯ ಸ್ನೇಹಿತನ ಮೇಲೆ ಬಾಟಲಿಗಳಿಂದ ಹಲ್ಲೆಗೈದರೆನ್ನಲಾಗಿದೆ.
ಯುವತಿ ಪಿಸಿಆರ್‌ಗೆ ಕರೆ ಮಾಡಿದರೂ ಅವರು ಬರುವುದು ತಡವಾಗಿದ್ದರಿಂದ ಅಮರ್ ಕಾಲನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತೆಂದು ಸಂತ್ರಸ್ತೆಯ ಸ್ನೇಹಿತೆ ತಿಳಿಸಿದ್ದಾಳೆ.
ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ಆರೋಪಿಗಳನ್ನು ಗುರುತಿಸಲಾಗಿದ್ದು ಅವರನ್ನು ಬಂಧಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ತರುವಾಯ ಆರೋಪಿಗಳೊಂದಿಗಿದ್ದ ಮಹಿಳೆಯೊಬ್ಬಳು ಪ್ರತಿ ದೂರು ದಾಖಲಿಸಿ ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತ ತಮ್ಮ ಮೇಲೆ ಮೊದಲು ಹಲ್ಲೆಗೈದಿದ್ದಾಗಿ ದೂರಿದ್ದಾಳೆ.





