ಸುಳ್ಯ:ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ - ಕಾರಣ ಇನ್ನೂ ನಿಗೂಢ

ಸುಳ್ಯ:ಮೂವರು ಮಕ್ಕಳೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಗೆ ಸಂಬಂಧಿಸಿ ಕಾರಣ ಇನ್ನೂ ನಿಗೂಢವಾಗಿಯೇ ಇದೆ. ಅಜ್ಜಾವರ ಗ್ರಾಮದ ಮುಳ್ಯ ಅಟ್ಲೂರಿನ ರವಿರಾಜ್ ಎಂಬವರ ಪತ್ನಿ ಕುಸುಮಾ (32 ) ತನ್ನ ಮಕ್ಕಳಾದ ಲಿಖಿತಾ, ರಕ್ಷಿತಾ ಹಾಗೂ ಸುಜನ್ ಅವರೊಂದಿಗೆ ಮಂಗಳವಾರ ಅಪರಾಹ್ನ ಮನೆ ಸಮೀಪದ ಪಯಸ್ವಿನಿ ನದಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಮೂವರು ಮುದ್ದು ಕಂದಮ್ಮಗಳೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಊರಿನಲ್ಲಿ ದಿಗ್ಭ್ರಮೆಗೆ ಹಾಗೂ ದುಃಖಕ್ಕೆ ಕಾರಣವಾಗಿತ್ತು. ನೂರಾರು ಜನ ಪರಿಸರದಲ್ಲಿ ಸೇರಿದ್ದರು. ಹಲವು ವದಂತಿಗಳಿಗೂ ಕಾರಣವಾಗಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸರು ಹಲವರ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ.
ಕುಸುಮಾ ಹಾಗೂ ರವಿರಾಜ್ ಪರಸ್ಪರ ಅನ್ಯೋನ್ಯತೆಯಿಂದಿದ್ದರು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಮನೆಯಲ್ಲಿ ಆಸ್ತಿಗೆ ಸಂಬಂಧಿಸಿ ಸಹೋದರರೊಳಗೆ ಇತ್ತೀಚೆಗೆ ಘರ್ಷಣೆ ನಡೆದಿತ್ತೆನ್ನಲಾಗಿದೆ. ಅಲ್ಲದೆ ಮನೆಯೊಳಗೂ ಕೆಲವು ಬಾರಿ ಮನಸ್ತಾಪವಾಗಿತ್ತು ಎಂದೂ ಹೇಳಲಾಗುತ್ತಿದೆ. ಈ ಎಲ್ಲಾ ಘಟನೆಗಳಿಂದ ಮಾನಸಿಕವಾಗಿ ಖಿನ್ನರಾಗಿದ್ದ ಕುಸುಮಾ ಈ ಕೃತ್ಯ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಕುಸುಮ ಕಾಸರಗೋಡು ಜಿಲ್ಲೆಯ ಬಂದಡ್ಕದ ಪಾಲಾರಿನ ಮಾವಜಿ ಗೋಪಾಲ ಎಂಬವರ ಪುತ್ರಿಯಾಗಿದ್ದು, 6 ವರ್ಷದ ಹಿಂದೆ ಇವರ ವಿವಾಹವು ರವಿರಾಜರೊಂದಿಗೆ ನಡೆದಿತ್ತು. ಒಂದು ವಾರದ ಹಿಂದಷ್ಟೇ ಕುಸುಮಾ ತವರು ಮನೆಗೆ ಹೋಗಿ ಬಂದಿದ್ದರು. ‘ಆಕೆಯ ಮನೆಯಲ್ಲಿ ಆಕೆಯ ಪತಿ ಹಾಗೂ ತಮ್ಮನ ನಡುವೆ ಆಸ್ತಿಗೆ ಸಂಬಂಧಿಸಿ ಘರ್ಷಣೆ ನಡೆದಿತ್ತು. ಈ ಘಟನೆಯಿಂದ ಆಕೆ ಮಾನಸಿಕವಾಗಿ ಖಿನ್ನಲಾಗಿದ್ದಳು. ನಾನೇ ಮಂಗಳೂರಿಗೆ ಕರೆದೊಯ್ದು ವೈದ್ಯರಿಗೆ ತೋರಿಸಿದ್ದೆ. ಆ ಬಳಿಕ ತನಗೆ ಯಾವುದೇ ಖಾಯಿಲೆ ಇಲ್ಲ ಎಂದು ಆಕೆಯೇ ತಿಳಿಸಿದ್ದಳು. ಯಾವುದಾದರೂ ಆಕಸ್ಮಿಕವಾದ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು’ ಗೋಪಾಲರು ಸುಳ್ಯ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಮುನಿದ ಪಯಸ್ವಿನಿ:
ಸುಳ್ಯದ ಪಯಸ್ವಿನಿ ನದಿ ಮಳೆ ಬಾರದೆ ಬರಡಾಗಿತ್ತು. ಹೊಂಡದಲ್ಲಿಯೂ ನೀರಿರಲಿಲ್ಲ. ಆದರೆ ಕಳೆದ ವಾರ ಬಂದ ಎರಡು ಮಳೆಯಿಂದಾಗಿ ಹೊಂಡದಲ್ಲಿ ನೀರು ಶೇಖರಣೆಯಾಗಿತ್ತು. ಅದೇ ಹೊಂಡದ ನೀರಿಗೆ ಜಿಗಿದು ಕುಸುಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಅಪರಾಹ್ನ ಮನೆಯಿಂದ ಮಕ್ಕಳೊಂದಿಗೆ ಹೊರಗೆ ಹೋಗಿದ್ದ ಆಕೆ ಸಂಜೆಯಾದರೂ ಮನೆಗೆ ಮರಳದಿದ್ದುದರಿಂದ ಸಂಶಯಗೊಂಡ ಮನೆಯವರು ಹುಡುಕಾಡಿದಾಗ ಘಟನೆ ಬಯಲಾಗಿತ್ತು.
ಅಂತ್ಯಕ್ರಿಯೆ:
ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಕುಸುಮಾ ಹಾಗೂ ಮೂವರು ಮಕ್ಕಳ ಮೃತ ದೇಹವನ್ನು ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿ ಶವಾಗಾರದಲ್ಲಿ ಇಡಲಾಗಿತ್ತು. ಬುಧವಾರ ನಾಲ್ವರ ಅಂತ್ಯಕ್ರಿಯೆ ನಡೆಯಿತು.







